Accused Sri Krishna alias Shriki
Accused Sri Krishna alias Shriki  
ಸುದ್ದಿಗಳು

ಬಿಟ್‌ ಕಾಯಿನ್‌ ಹಗರಣ: ಎಫ್‌ಐಆರ್‌ ರದ್ದತಿ ಕೋರಿ ಶ್ರೀಕಿ, ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದೂಡಿಕೆ

Bar & Bench

ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಕಾನೂನು ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಮುಂದೂಡಿದೆ.

ಬೆಂಗಳೂರಿನ ಶ್ರೀಕಿ, ಸಹ ಆರೋಪಿಗಳಾದ ಸುನೀಶ್‌ ಹೆಗ್ಡೆ ಮತ್ತು ಪ್ರಸಿಧ್ ಶೆಟ್ಟಿ ಹಾಗೂ ಹೇಮಂತ್‌ ಮುದ್ದಪ್ಪ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “2022ರ ಸೆಪ್ಟೆಂಬರ್‌ 7ರಂದು ಸುನೀಶ್‌ ಹೆಗ್ಡೆ ಮತ್ತು ಪ್ರಸಿಧ್ ಶೆಟ್ಟಿ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಪ್ಪಾಗಿ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಯಾವುದೇ ಮಧ್ಯಂತರ ಆದೇಶವಾಗಿಲ್ಲ. ಹೀಗಾಗಿ, ಮಧ್ಯಂತರ ಆದೇಶ ವಿಸ್ತರಣೆ ಎಂಬ ಸಾಲನ್ನು ತೆಗೆದುಹಾಕಬೇಕು. ಅಲ್ಲದೇ, ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಜುಲೈ 19ರಂದು ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಕೋರಿದರು.

ಇದನ್ನು ಪೀಠವು ಪುರಸ್ಕರಿಸಿ, ಜುಲೈ 19ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.

ಶ್ರೀಕಿ ಹಾಗೂ ಇತರೆ ಮೂವರು ಆರೋಪಿಗಳ ಕೋರಿಕೆ ಏನು: 2020ರ ನವೆಂಬರ್‌ 27ರಂದು ಕೇಂದ್ರೀಯ ಅಪರಾಧ ತನಿಖಾ ದಳದ (ಸಿಸಿಬಿ) ಮಾದಕ ದ್ರವ್ಯ ವಿರೋಧಿ ದಳದ (ಎಎನ್‌ಡಬ್ಲು) ಇನ್‌ಸ್ಪೆಕ್ಟರ್‌ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 34, 465, 468, 471, 419, 120ಬಿ, 379, 420, 384 ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66, 66 (ಸಿ), 66 (ಡಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಬಳಿಕ 2022ರ ನವೆಂಬರ್‌ 30ರ ಆದೇಶದ ಮೂಲಕ ಅದೇ ಪ್ರಕರಣವನ್ನು ಸಿಸಿಬಿಯ ಎಎನ್‌ಡಬ್ಲು ಇನ್‌ಸ್ಪೆಕ್ಟರ್‌ ಅವರಿಗೆ ವರ್ಗಾಯಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರ ಫೆಬ್ರವರಿ 22ರಂದು ಸಿಸಿಬಿಯ ಎಎನ್‌ಡಬ್ಲು ಪೊಲೀಸರು ಆರು ಆರೋಪಿಗಳ ವಿರುದ್ಧ ಬೆಂಗಳೂರಿನ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಶ್ರೀಕಿ ಮೊದಲನೇ ಆರೋಪಿ. ಸುನೀಶ್‌ ಹೆಗ್ಡೆ ಮತ್ತು ಪ್ರಸಿಧ್ ಶೆಟ್ಟಿ ಹಾಗೂ ಹೇಮಂತ್‌ ಮುದ್ದಪ್ಪ ಇತರೆ ಆರೋಪಿಗಳಾಗಿದ್ದಾರೆ.

ಕಾಟನ್‌ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌, ಆನಂತರ ಅದನ್ನು ಸಿಸಿಬಿಯ ಎಎನ್‌ಡಬ್ಲುಗೆ ವರ್ಗಾವಣೆ ಮಾಡಿರುವ ಆದೇಶ ಹಾಗೂ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿ ಹಾಗೂ ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಶ್ರೀಕಿ ಹಾಗೂ ಇತರೆ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದಕ್ಕೂ ಮುನ್ನ, ಎಫ್‌ಐಆರ್‌ ಹಾಗೂ ಕಾನೂನು ಪ್ರಕ್ರಿಯೆಗೆ ತಡೆ ನೀಡಬೇಕು ಎಂಬುದು ಅರ್ಜಿದಾರರ ಮಧ್ಯಂತರ ಕೋರಿಕೆಯಾಗಿದೆ.

ಬಲವಂತವಾಗಿ ತಮ್ಮಿಂದ ಸ್ವಯಂ ಹೇಳಿಕೆ ಪಡೆಯಲಾಗಿದೆ. ಆರೋಪಿತ ಅಪರಾಧ ನಡೆದ ಎರಡು ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಏತಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ವಿವರಿಸಿಲ್ಲ. ಎಫ್‌ಐಆರ್‌ ದಾಖಲಿಸಿರುವ ಪೊಲೀಸ್‌ ಅಧಿಕಾರಿಯು ಬಾಧಿತರಲ್ಲ. ಹೀಗಾಗಿ, ಅವರಿಗೆ ಪ್ರಕರಣ ದಾಖಲಿಸಲು ಯಾವುದೇ ಹಕ್ಕಿಲ್ಲ. ಸಿಸಿಬಿಗೆ ಸೇರಿದ ಅಧೀನ ಪೊಲೀಸ್‌ ಅಧಿಕಾರಿಗೆ ಪೊಲೀಸ್‌ ಜಂಟಿ ಆಯುಕ್ತರು ಪ್ರಕರಣ ವರ್ಗಾಯಿಸಲಾಗದು.

ಸಿಸಿಬಿಐ ಕಚೇರಿಯನ್ನು ಪೊಲೀಸ್‌ ಠಾಣೆ ಎಂದು ಘೋಷಿಸಲಾಗದು. ಹೀಗಾಗಿ, ಅವರು ಆರೋಪ ಪಟ್ಟಿ ಸಲ್ಲಿಸಲಾಗದು. ಸದ್ಯ ಇರುವ ಕಾನೂನಿನ ಪ್ರಕಾರ ಹ್ಯಾಕಿಂಗ್‌ ಅಪರಾಧವಲ್ಲ ಅಥವಾ ಆರೋಪಿತ ಹ್ಯಾಕಿಂಗ್‌ ಯಾವುದೇ ಕಾನೂನಿನಲ್ಲಿ ಅಪರಾಧ ಎಂದು ಉಲ್ಲೇಖಿತವಾಗಿಲ್ಲ. ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ವರ್ಚುವಲ್‌ ವ್ಯವಸ್ಥೆಯ ಮೂಲಕ ಹ್ಯಾಕ್‌ ಮಾಡಲಾಗದ ರೀತಿಯಲ್ಲಿ ರೂಪಿಸಲಾಗಿದೆ ಎಂಬುದು ಸೇರಿದಂತೆ ಹಲವು ಆಧಾರಗಳನ್ನು ತಮ್ಮ ವಿರುದ್ಧದ ಪ್ರಕರಣ ಮತ್ತು ಕಾನೂನು ಪ್ರಕ್ರಿಯೆ ವಜಾ ಮಾಡಲು ಶ್ರೀಕಿ ಮತ್ತು ಇತರೆ ಆರೋಪಿಗಳು ಅರ್ಜಿಯಲ್ಲಿ ಬಳಕೆ ಮಾಡಿದ್ದಾರೆ.

ಅರ್ಜಿದಾರರ ಪರವಾಗಿ ವಕೀಲರಾದ ಗೌರವ್‌ ಎನ್‌, ಅಭಿಷೇಕ್‌ ಜೆ ಹಾಗೂ ದಿನೇಶ್‌ಕುಮಾರ್‌ ರಾವ್‌ ಕೆ ಅವರು ವಕಾಲತ್ತು ಹಾಕಿದ್ದಾರೆ.