Bitcoin
Bitcoin Representative Image
ಸುದ್ದಿಗಳು

[ಬಿಟ್‌ಕಾಯಿನ್‌ ಹಗರಣ] ಸುದರ್ಶನ್‌ಗೆ ವಿದೇಶ ಪ್ರವಾಸಕ್ಕೆ ಅನುಮತಿಸುವ ಸ್ಥಿತಿಯಲ್ಲಿಲ್ಲ: ಹೈಕೋರ್ಟ್‌ಗೆ ಇ ಡಿ ವಿವರಣೆ

Bar & Bench

ಬಿಟ್‌ಕಾಯಿನ್‌ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್‌ ಶ್ರೀ ಕೃಷ್ಣನ ಸಹೋದರ ಸುದರ್ಶನ್‌ ರಮೇಶ್‌ ಅವರನ್ನು ದೇಶ ತೊರೆಯಲು ಅನುಮತಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಮಂಗಳವಾರ ಜಾರಿ ನಿರ್ದೇಶನಾಲಯವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಜಾರಿ ನಿರ್ದೇಶನಾಲಯವು ವಿದೇಶ ಪ್ರವಾಸ ಕೈಗೊಳ್ಳುವುದನ್ನು ಕಾನೂನುಬಾಹಿರವಾಗಿ ನಿರ್ಬಂಧಿಸಿದ್ದು, ಈ ಸಂಬಂಧದ ಆದೇಶ ರದ್ದುಪಡಿಸುಂತೆ ಕೋರಿ ಮೆಕ್ಯಾನಿಕಲ್‌ ಎಂಜಿನಿಯರ್‌ ಸುದರ್ಶನ್‌ ರಮೇಶ್‌ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“2022ರ ಮೇ 5ರಂದು ವಿಚಾರಣೆಗೆ ಹಾಜರಾಗುವಂತೆ ಸುದರ್ಶನ್‌ ಅವರಿಗೆ ಸಮನ್ಸ್‌ ನೀಡಲಾಗಿತ್ತು. ವಿಚಾರಣೆಯಲ್ಲಿ ಭಾಗಿಯಾಗಿದ್ದ ಸುದರ್ಶನ್‌ ಅವರು ತಮ್ಮ ಖಾತೆಯಿಂದ 50,000 ಪೌಂಡ್‌ (ಗ್ರೇಟ್‌ ಬ್ರಿಟನ್‌ ಪೌಂಡ್‌) ವರ್ಗಾವಣೆಗೆ ಸಂಬಂಧಿಸಿದಂತೆ ಹಾರಿಕೆ ಉತ್ತರ ನೀಡಿದ್ದಾರೆ. ಈ ಸಂಬಂಧ ವಿಸ್ತೃತ ತನಿಖೆ ನಡೆಸಬೇಕಿದ್ದು, ಪೌಂಡ್‌ ವರ್ಗಾವಣೆಗೆ ಸಂಬಂಧಿಸಿದಂತೆ ವಿದೇಶಿ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಬೇಕಿರುವುದರಿಂದ ತನಿಖೆ ಬಾಕಿ ಇದೆ. ಹೀಗಾಗಿ, ಸುದರ್ಶನ್‌ ಅವರನ್ನು ನೆದರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲು ಅನುಮತಿಸಲಾಗದು ಎಂದು ಸರ್ಕಾರದ ವಕೀಲರು ತಿಳಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಜಾರಿ ನಿರ್ದೇಶನಾಲಯವು ಸುದರ್ಶನ್‌ ವಿರುದ್ಧ ಹೊರಡಿಸಿರುವ ಲುಕ್‌ಔಟ್‌ ಸರ್ಕ್ಯುಲರ್‌ (ಎಲ್‌ಒಸಿ) ಹಿಂಪಡೆಯುವ ಸ್ಥಿತಿಯಲ್ಲಿ ಇಲ್ಲ” ಎಂದರು.

ಸುದರ್ಶನ್‌ ಪ್ರತಿನಿಧಿಸಿದ್ದ ವಕೀಲರು “ಹ್ಯಾಕಿಂಗ್‌ ಹಾಗೂ ಅಕ್ರಮ ಹಣ ಸಂಪಾದನೆಗೆ ಸಂಬಂಧಿಸಿದಂತೆ ಶ್ರೀಕಿ ವಿರುದ್ಧ ಹಲವು ಆರೋಪಗಳಿವೆ. 2021ರ ಡಿಸೆಂಬರ್‌ 29 ಮತ್ತು 30ರಂದು ಹಾಗೂ 2022ರ ಜನವರಿ 1ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಸುದರ್ಶನ್‌ ಹಾಜರಾಗಿದ್ದರು. 2022ರ ಜನವರಿ 1ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ಬಳಿಕ ಯಾವುದೇ ಸಮನ್ಸ್‌ ಜಾರಿಗೊಳಿಸಲಾಗಿಲ್ಲ” ಎಂದಿದ್ದಾರೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಮೇ 10ರ ಒಳಗೆ ತನಿಖೆ ಪೂರ್ಣಗೊಳಿಸಲಾಗುವುದು. ಆಗ ಅರ್ಜಿದಾರರು ನೆದರ್‌ಲ್ಯಾಂಡ್‌ಗೆ ತೆರಳಬಹುದೇ ಎಂಬುದರ ಕುರಿತು ತಿಳಿಸಲಾಗುವುದು ಎಂದಿತ್ತು.

ತಂದೆ ಹೈಪರ್‌ಟೆನ್ಷನ್‌ ಮತ್ತು ಪಾರ್ಕಿನ್‌ಸನ್‌ ನ್ಯೂನತೆಯಿಂದ ಬಳಲುತ್ತಿದ್ದು, ಸದ್ಯಕ್ಕೆ ಕೋಮಾದಲ್ಲಿದ್ದಾರೆ. ನಿರಂತರವಾಗಿ ಅವರಿಗೆ ವೈದ್ಯಕೀಯ ಉಪಚಾರದ ಅಗತ್ಯವಿದೆ. ಇದನ್ನು ನಿಭಾಯಿಸಲು ಹಣದ ಅವಶ್ಯಕತೆ ಇದ್ದು, ಕುಟುಂಬಸ್ಥರು ಜೀವನ ನಡೆಸಲು ನನ್ನನ್ನು ಆಧರಿಸಿದ್ದಾರೆ. ಹೀಗಾಗಿ, ಉದ್ಯೋಗಕ್ಕಾಗಿ ನೆದರ್‌ಲ್ಯಾಂಡ್‌ಗೆ ತೆರಳಲು ಎಲ್ಲಾ ಸಿದ್ಧತೆ ಮಾಡಿಕೊಂಡು ಜನವರಿ 13ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುವ ವೇಳೆ ಇಮಿಗ್ರೇಷನ್‌ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ. ತಮ್ಮ ಪಾಸ್‌ಪೋರ್ಟ್‌ ಅನ್ನು ನಿರ್ಬಂಧಿಸಲಾಗಿದೆ. ಪ್ರವಾಸ ನಿರ್ಬಂಧಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಸುದರ್ಶನ್‌ ರಮೇಶ್‌ ಮನವಿಯಲ್ಲಿ ಆಕ್ಷೇಪಿಸಿದ್ದಾರೆ.

ಬಿಟ್‌ಕಾಯಿನ್‌ ಹಗರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಶ್ರೀಕಿ ಸುತ್ತಲೂ ಸುತ್ತಿಕೊಂಡಿರುವ ಬಿಟ್‌ ಕಾಯಿನ್‌ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ತಾನು ಭಾರತದಲ್ಲೇ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಗಿ ಅವರು ಮನವಿಯಲ್ಲಿ ವಿವರಿಸಿದ್ದಾರೆ.