BJD MP Pinaki Misra and advocate Jai Anant Dehadrai  Pinaki Misra (FB) Dehadrai (X)
ಸುದ್ದಿಗಳು

ವಕೀಲ ದೇಹದ್ರಾಯ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಡಿ ಸಂಸದ ಪಿನಾಕಿ ಮಿಶ್ರಾ

ಪಿನಾಕಿ ಮಿಶ್ರಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಜೈ ಅನಂತ್ ದೆಹದ್ರಾಯ್ ಪಿನಾಕಿ ಅವರನ್ನು ʼಕ್ಯಾನಿಂಗ್ ಲೇನ್ʼ, ʼಒಡಿಯಾ ಬಾಬುʼ ಹಾಗೂ ʼಪುರಿಯ ದಲ್ಲಾಳಿʼ ಎಂದು ಜರೆದಿದ್ದಾಗಿ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

Bar & Bench

ತಮ್ಮ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿ ʼಕ್ಯಾನಿಂಗ್ ಲೇನ್ʼ, ʼಒಡಿಯಾ ಬಾಬುʼ ಹಾಗೂ ʼಪುರಿಯ ದಲ್ಲಾಳಿʼ ಎಂದು ಕರೆದಿದ್ದ ವಕೀಲ ಜೈ ಅನಂತ್ ದೆಹದ್ರಾಯ್‌ ವಿರುದ್ಧ ಬಿಜು ಜನತಾ ದಳ (ಬಿಜೆಡಿ) ಸದಸ್ಯ ಹಾಗೂ ಸಂಸದ ಪಿನಾಕಿ ಮಿಶ್ರಾ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ದೆಹದ್ರಾಯ್‌ ಅವರು ಕ್ಷಮೆಯಾಚಿಸಬೇಕು ಮತ್ತು ತಮಗೆ ಪರಿಹಾರ ನೀಡಬೇಕು ಎಂದು ಕೂಡ ಪಿನಾಕಿ ಅವರು ಕೋರಿದ್ದಾರೆ.

ಎಕ್ಸ್ (ಟ್ವಿಟರ್), ಸುದ್ದಿ ಸಂಸ್ಥೆಗಳಾದ ಪಿಟಿಐ ಹಾಗೂ ಎಎನ್‌ಐಗಳಲ್ಲಿ ಪ್ರಕಟಿಸಲಾಗಿರುವ ಮಾನಹಾನಿಕರ ವಸ್ತುವಿಷಯವನ್ನು ತೆಗೆದುಹಾಕುವ ಆದೇಶ ನೀಡಬೇಕು. ಜೊತೆಗೆ ದೆಹ್ರದಾಯ್‌ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ನಿರ್ದೇಶಿಸಬೇಕು ಎಂದು ಪಿನಾಕಿ ಕೋರಿದ್ದಾರೆ.

ದೆಹದ್ರಾಯ್‌ ಅವರ ಮಾಜಿ ಸಂಗಾತಿ ಹಾಗೂ ತೃಣಮೂಲ ಕಾಂಗ್ರೆಸ್‌ ನಾಯಕಿ ಮಹುವಾ ಮೊಯಿತ್ರಾ ಅವರೊಂದಿಗೆ ತಮಗೆ ನಿಕಟ ಸ್ನೇಹವಿದೆ. ಆದರೆ ದೆಹದ್ರಾಯ್‌ ಹಾಗೂ ಮೊಯಿತ್ರಾ ಅವರು ದೂರವಾದ ಬಳಿಕ ತಮಗೂ ಮಹುವಾ ಅವರಿಗೂ ನಂಟಿದೆ ಎಂದು ದೆಹ್ರದಾಯ್‌ ಆರೋಪಿಸಿದ್ದಾರೆ ಎಂಬುದಾಗಿ ಒಡಿಶಾದ ಪುರಿ ಕ್ಷೇತ್ರದ ಸಂಸದರೂ ಆದ ಪಿನಾಕಿ ದೂರಿದ್ದಾರೆ.

ತಮ್ಮನ್ನು ʼಕ್ಯಾನಿಂಗ್ ಲೇನ್ʼ,, ʼಒಡಿಯಾ ಬಾಬುʼ ಹಾಗೂ ʼಪುರಿಯ ದಲ್ಲಾಳಿʼ ಎಂದು ಗುಪ್ತನಾಮಗಳಲ್ಲಿ ಕರೆದ ದೆಹದ್ರಾಯ್‌ ಅವರು ಮೊಯಿತ್ರಾ ಮಾತ್ರವಲ್ಲದೆ ತಮ್ಮನ್ನೂ ಸೇರಿದಂತೆ ಮೊಯಿತ್ರಾ ಜೊತೆ ವೈಯಕ್ತಿಕ ನಂಟಿರುವ ವ್ಯಕ್ತಿಗಳ ವಿರುದ್ಧ ಆರೋಪಗಳ ಸುರಿಮಳೆ ಮುಂದುವರೆಸಿದರು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಮೊಯಿತ್ರಾ ಪರವಾಗಿ ಪೀಠೋಪಕರಣ ಖರೀದಿಗೆ ಮಿಶ್ರಾ ಬಳಿ ₹ 2 ಕೋಟಿ ಇರಿಸಲಾಗಿತ್ತು ಎಂದು ದೆಹದ್ರಾಯ್‌ ಅವರು ಸಿಬಿಐಗೆ ನೀಡಿರುವ ದೂರನ್ನು ಪ್ರಸ್ತಾಪಿಸಿರುವ ಪಿನಾಕಿ ಅವರು ತಮಗೆ ಹಣ ನೀಡುವುದಕ್ಕೂ ಮೊದಲೇ ಮಹುವಾ ಅವರು ಪೀಠೋಪಕರಣ ಖರೀದಿಸಿದ್ದರು ಎಂದು ತಿಳಿಸಿದ್ದಾರೆ.

ಗಮನಾರ್ಹ ಸಂಗತಿ ಎಂದರೆ ಮಹುವಾ ಹಾಗೂ ದೆಹದ್ರಾಯ್‌ ಅವರು ಈ ಹಿಂದೆ ಪರಸ್ಪರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ದೆಹದ್ರಾಯ್‌ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹುವಾಗೆ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಮಹುವಾ ಅವರು ಹೂಡಿರುವ ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಇದೆ.