ಮತದಾರರ ನಕಲಿ ಗುರುತಿನ ಚೀಟಿ ತಯಾರಿಸುತ್ತಿದ್ದಾರೆ ಎಂದು ಆರೋಪಿಸಿ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಡಲಾಗಿದ್ದ ಟ್ವೀಟ್‌ಗಳನ್ನು ಅಳಿಸಿ ಹಾಕಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಶಾಸಕ ರಿಜ್ವಾನ್ ಅರ್ಷದ್ ಶುಕ್ರವಾರ ಹಿಂಪಡೆದಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಐಟಿ ಘಟಕದ ಅಧ್ಯಕ್ಷರ ವಿರುದ್ಧ ಬೆಂಗಳೂರಿನ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಖಾಸಗಿ ದೂರನ್ನು 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ವಿಚಾರಣೆ ನಡೆಸಿದರು.
ರಿಜ್ವಾನ್ ಪರ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಸಂಜಯ್ ಯಾದವ್ ಅವರು “ದೂರುದಾರರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದರಿಂದ ಈ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಇದೀಗ, ಆಕ್ಷೇಪಾರ್ಹ ಟ್ವೀಟ್‌ಗಳ ಲಿಂಕ್‌ಗಳನ್ನು ತೆಗೆದು ಹಾಕಲಾಗಿದ್ದು, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಡಿಸೆಂಬರ್ 8ರಂದು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ. ಟ್ವೀಟ್‌ಗಳನ್ನು ತೆಗೆದುಹಾಕಿರುವುದರಿಂದ ಅದರಲ್ಲಿ ಮಾಡಲಾಗಿದ್ದ ಆರೋಪಗಳನ್ನೂ ಹಿಂಪಡೆದಂತಾಗಿದ್ದು, ದೂರುದಾರರು ಪ್ರಕರಣವನ್ನು ಮುಂದುವರಿಸುವ ಅಪೇಕ್ಷೆ ಹೊಂದಿಲ್ಲ. ಆದ್ದರಿಂದ, ಆರೋಪಿಗಳ ಮೆಮೊ ಪರಿಗಣಿಸಿ, ಖಾಸಗಿ ದೂರು ಹಿಂಪಡೆಯಲು ದೂರುದಾರರಿಗೆ ಅನುಮತಿ ನೀಡಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಖಾಸಗಿ ದೂರು ಹಿಂಪಡೆಯಲು ಶಾಸಕ ರಿಜ್ವಾನ್ ಅರ್ಷದ್‌ಗೆ ಅನುಮತಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದರು. ವಿಚಾರಣೆ ವೇಳೆ ರಿಜ್ವಾನ್ ಅರ್ಷದ್ ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದರು.
ಖಾಸಗಿ ದೂರಿನ ಸಂಬಂಧ 2025ರ ಅಕ್ಟೋಬರ್ 28ರಂದು ನಡೆದ ವಿಚಾರಣೆ ವೇಳೆ ಬಿಜೆಪಿ ರಾಜ್ಯ ಘಟಕದ ಪರ ವಕೀಲರು, ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವಾಗಿ ತಮ್ಮ ಕಕ್ಷಿದಾರರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿ, ಕಾಲಾವಕಾಶ ಪಡೆದುಕೊಂಡಿದ್ದರು. ಡಿಸೆಂಬರ್ 8ರಂದು ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ ರಿಜ್ವಾನ್ ಅರ್ಷದ್ ವಿರುದ್ಧ ಮಾಡಲಾಗಿದ್ದ ಮೂರು ಆಕ್ಷೇಪಾರ್ಹ ಟ್ವೀಟ್‌ಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿ, ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ: ರಿಜ್ವಾನ್ ಅರ್ಷದ್ 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ (ಸೆಂಟ್ರಲ್) ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಅವರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಯೂತ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಂ ಖಲೀಲುಲ್ಲಾ ಅವರನ್ನು ಬಿಜೆಪಿ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
ಈ ಕುರಿತು 2019ರ ಏಪ್ರಿಲ್ 15ರಂದು ಬಿಜೆಪಿ ಕರ್ನಾಟಕ ಟ್ವಿಟರ್ ಹ್ಯಾಂಡಲ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿ, ಇಬ್ರಾಹಿಂ ಖಲೀಲುಲ್ಲಾ ಅವರು ರಿಜ್ವಾನ್ ಅರ್ಷದ್ ಪರವಾಗಿ ಕೆಜಿ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 507ರಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿತ್ತರಿಸಿದ್ದ ಬಿಜೆಪಿ, ರಿಜ್ವಾನ್ ಅರ್ಷದ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.
ಇದರಿಂದ, 2019ರ ಮೇ 22ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ರಿಜ್ವಾನ್ ಅರ್ಷದ್, ಯಾವುದೇ ಅಕ್ರಮ ನಡೆದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ನನ್ನ ಘನತೆಗೆ ಧಕ್ಕೆ ತರುವ ಏಕೈಕ ಉದ್ದೇಶದಿಂದ ಬಿಜೆಪಿ ಸುಳ್ಳು ಹಾಗೂ ಆಧಾರರಹಿತ ವಿಷಯವನ್ನು ಹಬ್ಬಿಸಿದೆ. ಇದರಿಂದ, ನನಗೆ, ನನ್ನ ಕುಟುಂಬ ಸದಸ್ಯರಿಗೆ, ನನ್ನ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮಾನಸಿಕ ಹಿಂಸೆಯಾಗಿದೆ. ಆದ್ದರಿಂದ, ಆರೋಪಿಗಳಾದ ಬಿಜೆಪಿಯ ರಾಜ್ಯ ಘಟಕದ ಅಂದಿನ ಅಧ್ಯಕ್ಷರು ಹಾಗೂ ಐಟಿ ಸೆಲ್ ಅಧ್ಯಕ್ಷರ ವಿರುದ್ಧ ಐಪಿಸಿ ಸೆಕ್ಷನ್ 499 (ಮಾನಹಾನಿ), ಸೆಕ್ಷನ್ 500 (ಮಾನಹಾನಿಗೆ ಶಿಕ್ಷೆ) ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು.