Arun Kumar Puthila & Karnataka HC 
ಸುದ್ದಿಗಳು

ಕಲಬುರ್ಗಿಗೆ ಗಡಿಪಾರು ನೋಟಿಸ್‌ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ

ರಾಜಕೀಯ ವಿರೋಧಿಗಳ ಒತ್ತಡಕ್ಕೆ ಒಳಗಾಗಿ ಗಡಿಪಾರು ಆದೇಶ ಮಾಡಲು ನಿರ್ಧರಿಸಿದ್ದು, ಕಿರುಕುಳ ನೀಡುವ ಮೂಲಕ ತಮ್ಮ ರಾಜಕೀಯ ಬದುಕು ನಾಶಪಡಿಸಲು ಮುಂದಾಗಿದ್ದಾರೆ. ಹೀಗಾಗಿ, ಷೋಕಾಸ್‌ ನೋಟಿಸ್‌ ರದ್ದುಪಡಿಸಬೇಕು ಎಂದು ಪುತ್ತಿಲ ಕೋರಿದ್ದಾರೆ.

Bar & Bench

ಮಂಗಳೂರಿನಲ್ಲಿ ಈಚೆಗೆ ನಡೆದಿರುವ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು ಕಾರ್ಯಾಚರಣೆಗೆ ಇಳಿದಿದ್ದು, ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಕಲಬುರ್ಗಿಗೆ ಗಡಿಪಾರು ಮಾಡುವ ಸಂಬಂಧ ಪುತ್ತೂರು ವಿಭಾಗದ ಉಪ ವಿಭಾಗಾಧಿಕಾರಿ ಜಾರಿ ಮಾಡಿರುವ ನೋಟಿಸ್‌ ರದ್ದುಪಡಿಸುವಂತೆ ಕೋರಿ ಪುತ್ತಿಲ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮೆಸರ್ಸ್‌ ಪಿ ಪಿ ಹೆಗ್ಡೆ ಅಸೋಸಿಯೇಟ್ಸ್‌ನ ವಕೀಲ ಗಣಪತಿ ಭಟ್‌ ಅವರು ಅರ್ಜಿ ಸಲ್ಲಿಸಿದ್ದು, ಅದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಪುತ್ತಿಲ ಅವರನ್ನು ಕಲಬುರ್ಗಿಯ ಶಹಬಾದ್‌ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಯಾಕೆ ಗಡಿಪಾರು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಉತ್ತರಿಸಲು ಜೂನ್‌ 6ರಂದು ಪುತ್ತೂರು ವಿಭಾಗದ ಉಪವಿಭಾಗಾಧಿಕಾರಿ ಮತ್ತು ಉಪ ವಿಭಾಗದ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರಾಗುವಂತೆ ಮೇ 28ರಂದು ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 58ರ ಅಡಿ ಷೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ.

ಸಿಆರ್‌ಪಿಸಿ ಸೆಕ್ಷನ್‌ 107 ಅಥವಾ ಬಿಎನ್‌ಎಸ್‌ಎಸ್‌ ಸೆಕ್ಷನ್‌ 126 ಅಡಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಲಾಗಿದೆ. ಹೀಗಾಗಿ, ಗಡಿಪಾರು ಕುರಿತಾದ ಆಕ್ಷೇಪಾರ್ಹವಾದ ಷೋಕಾಸ್‌ ನೋಟಿಸ್‌ ಅಕ್ರಮವಾಗಿದ್ದು, ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸಲಿದೆ. ಪೊಲೀಸರು ತಮ್ಮ ರಾಜಕೀಯ ವಿರೋಧಿಗಳ ಒತ್ತಡಕ್ಕೆ ಒಳಗಾಗಿ ಗಡಿಪಾರು ಆದೇಶ ಮಾಡಲು ನಿರ್ಧರಿಸಿದ್ದು, ಕಿರುಕುಳ ನೀಡುವ ಮೂಲಕ ತಮ್ಮ ರಾಜಕೀಯ ಬದುಕನ್ನು ನಾಶಪಡಿಸಲು ಮುಂದಾಗಿದ್ದಾರೆ. ಹೀಗಾಗಿ, ಷೋಕಾಸ್‌ ನೋಟಿಸ್‌ ರದ್ದುಪಡಿಸಬೇಕು ಎಂದು ಕೋರಲಾಗಿದೆ.

ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರ ಒತ್ತಡಕ್ಕೆ ಮಣಿದು ಗಡಿಪಾರು ಆದೇಶ ಮಾಡಲಾಗಿದೆ. ಷೋಕಾಸ್‌ ನೋಟಿಸ್‌ನಲ್ಲಿ ಪೊಲೀಸರು ಉಲ್ಲೇಖಿಸಿರುವ ತಮ್ಮ ವಿರುದ್ಧದ ಪ್ರಕರಣಗಳು ಮುಕ್ತಾಯವಾಗಿವೆ. ಇಲ್ಲವೇ, ಅವುಗಳಲ್ಲಿ ಖುಲಾಸೆಗೊಂಡಿದ್ದೇನೆ. ಅದಾಗ್ಯೂ, ಪುತ್ತೂರು ಇನ್‌ಸ್ಪೆಕ್ಟರ್‌ ವರದಿ ಆಧರಿಸಿ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪುತ್ತಿಲ ಕೋರಿದ್ದಾರೆ.