Krishna Rao 
ಸುದ್ದಿಗಳು

ಬಿಜೆಪಿ ಮುಖಂಡನ ಪುತ್ರ ಕೃಷ್ಣ ರಾವ್‌ ಪ್ರಕರಣ: ಮಧ್ಯಸ್ಥಿಕೆದಾರರಾಗಿ ಹಿರಿಯ ವಕೀಲೆ ಸುಶೀಲಾ ನೇಮಿಸಿದ ಹೈಕೋರ್ಟ್‌

ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಕೃಷ್ಣ ರಾವ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Bar & Bench

ತರುಣಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮಗುವಿಗೆ ತಂದೆಯಾದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಪಿ ಜಿ ಜಗನ್ನಿವಾಸ ರಾವ್ ಪುತ್ರ ಕೃಷ್ಣ ರಾವ್ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಂಧಾನ ಕೇಂದ್ರದ ಮಧ್ಯಸ್ಥಿಕೆದಾರರನ್ನಾಗಿ ಹಿರಿಯ ವಕೀಲೆ ಎಸ್‌ ಸುಶೀಲಾ ಅವರನ್ನು ನೇಮಕ ಮಾಡಲಾಗಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಕೃಷ್ಣ ರಾವ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೃಷ್ಣ ರಾವ್ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾವನ್ನು ಪೀಠಕ್ಕೆ ತಿಳಿಸಿದರು. ಇದನ್ನು ಮಾನ್ಯ ಮಾಡಿದ ಪೀಠವು ಮಧ್ಯಸ್ಥಿಕೆದಾರರನ್ನಾಗಿ ಎಸ್‌ ಸುಶೀಲಾ ಅವರನ್ನು ನೇಮಕ ಮಾಡಿ ಆದೇಶಿಸಿತು. ‌

ಜೂನ್ 19ರಂದು ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟವರು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ಸೂಚಿಸಿತು. ಅಂತೆಯೇ, ಸಂತ್ರಸ್ತೆಗೆ ಪ್ರತಿ ತಿಂಗಳೂ ನೀಡಬೇಕಾಗಿರುವ ಪರಿಹಾರದದ ₹75 ಸಾವಿರ ಮೊತ್ತವನ್ನು ಅರ್ಜಿದಾರರು ನಾಲ್ಕು ದಿನಗಳಲ್ಲಿ ಪಾವತಿಸಬೇಕು ಎಂದು ಹೆಗ್ಡೆ ಅವರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿತು.

ಅರ್ಜಿದಾರ ಕೃಷ್ಣ ರಾವ್ ಸದ್ಯ ಎಂಜಿನಿಯರಿಂಗ್ ವಿದ್ಯಾರ್ಥಿ. ಸಂತ್ರಸ್ತೆಗೆ ಈಗ 10 ತಿಂಗಳ ಗಂಡು ಮಗುವಿದ್ದು ಬಿ.ಎಸ್‌ಸಿ ಪದವಿ ಶಿಕ್ಷಣವನ್ನು ಅರ್ಧಕ್ಕೇ ಕೈಬಿಟ್ಟಿದ್ದಾರೆ. ಕೃಷ್ಣರಾವ್ ವಿರುದ್ಧ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ, ಬಿಎನ್‌ಎಸ್‌ ಸೆಕ್ಷನ್‌ 64, 92 (ಎಂ) ಮತ್ತು 69ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದರ ನ್ಯಾಯಿಕ ವಿಚಾರಣೆ ಆರನೇ ಹೆಚ್ಚುವರಿ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದೆ.