Chandru Lamani 
ಸುದ್ದಿಗಳು

ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಸ್ವೀಕಾರ: ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ

ಶಾಸಕ ಚಂದ್ರು ಲಮಾಣಿ, ಅವರ ಆಪ್ತ ಸಹಾಯಕ ಮಂಜುನಾಥ್‌ ವಾಲ್ಮೀಕಿ, ಖಾಸಗಿ ಆಪ್ತ ಸಹಾಯಕ ಗುರುನಾಯ್ಕ್‌ ಅವರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿದ ನ್ಯಾಯಾಲಯ.

Bar & Bench

ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸೇರಿ ಮೂವರು ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಭಾನುವಾರ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಗದಗ ಲೋಕಾಯುಕ್ತ ಪೊಲೀಸರು ಮೂವರು ಆರೋಪಿಗಳನ್ನು ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಕರೆತಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರ ನಿವಾಸದಲ್ಲಿ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಶಾಸಕ ಚಂದ್ರು ಲಮಾಣಿ, ಅವರ ಆಪ್ತ ಸಹಾಯಕ ಮಂಜುನಾಥ್‌ ವಾಲ್ಮೀಕಿ, ಖಾಸಗಿ ಆಪ್ತ ಸಹಾಯಕ ಗುರುನಾಯ್ಕ್‌ ಅವರನ್ನು ಮಾರ್ಚ್‌ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.

ಪ್ರಕರಣ ಹಿನ್ನೆಲೆ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ಚೆಕ್‌ ಡ್ಯಾಂ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಥಮ ದರ್ಜೆ ಗುತ್ತಿಗೆದಾರ ವಿಜಯ್ ಪೂಜಾರ್‌ ಈ ಗುತ್ತಿಗೆ ಪಡೆದುಕೊಂಡಿದ್ದರು. ಈ ಬಾಕಿ ಕಾಮಗಾರಿ ಮುಂದುವರೆಸಲು ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ್‌ ಪೂಜಾರ್‌ಗೆ ₹11 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಗುತ್ತಿಗೆದಾರ ವಿಜಯ್‌ ಪೂಜಾರ್‌ ಗದಗ ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಫೆಬ್ರವರಿ 21ರಂದು ಲಕ್ಮೇಶ್ವರದ ಬಾಲಾಜಿ ಆಸ್ಪತ್ರೆಯಲ್ಲಿ ಗುತ್ತಿಗೆದಾರ ವಿಜಯ್‌ರಿಂದ ₹5 ಲಕ್ಷ ಲಂಚ ಸ್ವೀಕರಿಸುವಾಗ ಮೂವರು ಆರೋಪಿಗಳು ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಗುತ್ತಿಗೆದಾರ ಮತ್ತು ಶಾಸಕ ಚಂದ್ರು ಲಮಾಣಿ ನಡುವೆ ನಡೆದ ಸಂಭಾಷಣೆ ಆಡಿಯೊವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಶಾಸಕರು ಕಮಿಷನ್‌ ಬಗ್ಗೆ ಮಾತನಾಡಿರುವುದು ಹಾಗೂ ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವುದು ಆಡಿಯೊದಲ್ಲಿದೆ ಎನ್ನಲಾಗಿದೆ. ಈ ಸಂಬಂಧ ಗದಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.