Supreme Court, BJP, TMC 
ಸುದ್ದಿಗಳು

ಟಿಎಂಸಿ ವಿರುದ್ಧ ಅವಹೇಳನಕಾರಿ ಜಾಹೀರಾತು: ಕಲ್ಕತ್ತಾ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕದತಟ್ಟಿದ ಬಿಜೆಪಿ

Bar & Bench

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟಿಎಂಸಿ ಕೇಂದ್ರೀಕರಿಸಿ ಅವಹೇಳನಕಾರಿ ಜಾಹೀರಾತು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಿ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠ ನಿರಾಕರಿಸಿದ್ದು, ಇದನ್ನು ಪ್ರಶ್ನಿಸಿ ಬಿಜೆಪಿಯು ಗುರುವಾರ ಸುಪ್ರೀಂ ಕೋರ್ಟ್‌ ಕದತಟ್ಟಿದೆ.

ನ್ಯಾಯಮೂರ್ತಿಗಳಾದ ಬೆಲಾ ಎಂ. ತ್ರಿವೇದಿ ಮತ್ತು ಪಂಕಜ್‌ ಮಿತ್ತಲ್‌ ವಿಭಾಗೀಯ ಪೀಠದ ಮುಂದೆ ಹಿರಿಯ ವಕೀಲ ಸೌರಭ್‌ ಮಿಶ್ರಾ ಅವರು ತುರ್ತು ವಿಚಾರಣೆಗೆ ಕೋರಿದರು. ಆಗ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವುದಾಗಿ ತಿಳಿಸಿತು.

ಬಿಜೆಪಿ ಪ್ರತಿನಿಧಿಸಿದ್ದ ಮಿಶ್ರಾ ಅವರು ಜೂನ್‌ 4ರವೆರೆಗೆ ಏಕಪಕ್ಷೀಯ ಆದೇಶ ಮಾಡಲಾಗಿದೆ” ಎಂದರು. ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ತ್ರಿವೇದಿ ಅವರು “ರಜಾಕಾಲದ ಬಳಿಕ ನೀವೇಕೆ ಅರ್ಜಿ ವಿಚಾರಣೆಗೆ ಕೋರಬಾರದು” ಎಂದರು.

ಸೌರಭ್‌ ಅವರು ತುರ್ತು ವಿಚಾರಣೆ ಕೋರಿದ ಹಿನ್ನೆಲೆಯಲ್ಲಿ ಪೀಠವು ಪರಿಶೀಲಿಸಲಾಗುವುದು ಎಂದಿತು.

ಟಿಎಂಸಿ ವಿರುದ್ಧ ಅವಹೇಳನಕಾರಿ ಜಾಹೀರಾತು ಪ್ರಕಟಿಸದಂತೆ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠವು ಬಿಜೆಪಿಗೆ ಆದೇಶಿಸಿತ್ತು. ಇದರಲ್ಲಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠ ನಿರಾಕರಿಸಿತ್ತು.

ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ಮತ್ತು ನ್ಯಾ. ಹಿರನ್ಮಯ್‌ ಭಟ್ಟಾಚಾರ್ಯ ಅವರ ನೇತೃತ್ವದ ವಿಭಾಗೀಯ ಪೀಠವು ಎಲ್ಲಾ ರಾಜಕೀಯ ಪಕ್ಷಗಳು ಆರೋಗ್ಯಪೂರ್ಣ ಚುನಾವಣಾ ನೀತಿ ಪಾಲಿಸಬೇಕು. ಆಕ್ಷೇಪಾರ್ಹ ಜಾಹೀರಾತುಗಳ ಪ್ರಚಾರದಿಂದ ಜನರು ಸಂತ್ರಸ್ತರಾಗಲಿದ್ದಾರೆ ಎಂದಿತ್ತು.

ಇದಕ್ಕೂ ಮುನ್ನ ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠವು ಟಿಎಂಸಿ ದೂರಿನ ಹೊರತಾಗಿಯೂ ಕ್ರಮಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿತ್ತು.