BJP MP Anantkumar Hegde and Karnataka HC  
ಸುದ್ದಿಗಳು

ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಹೆಗ್ಡೆ‌ ಬಳಸಿರುವುದು ಕೀಳು ಭಾಷೆ; ಇದು ಶೋಭೆ ತರುವುದಿಲ್ಲ: ಹೈಕೋರ್ಟ್‌

“ನ್ಯಾಯಮೂರ್ತಿಗಳಿಗೂ ಅವರು ಗೌರವಾನ್ವಿತ ಮುಖ್ಯಮಂತ್ರಿ. ಅವರಿಗೂ ನಾವು ಗೌರವ ಕೊಡಲ್ಲ ಎಂದರೆ ಹೇಗೆ. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹಾಗೆಲ್ಲಾ ಮಾತನಾಡಬಾರದು” ಎಂದ ನ್ಯಾಯಾಲಯ.

Siddesh M S

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ ಬಳಕೆ ಮಾಡಿರುವುದು ಕೀಳು ಭಾಷೆ. ಇದು ಶೋಭೆ ತರುವಂಥದ್ದಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಮಮಂದಿರ ವಿಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ ಅವರು ತಮ್ಮ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆಯ ವೇಳೆ ನ್ಯಾ. ದೀಕ್ಷಿತ್‌ ಅವರು “ಅವರೊಬ್ಬ (ಅನಂತಕುಮಾರ್‌ ಹೆಗ್ಡೆ) ಉತ್ತಮ ವಾಗ್ಮಿಯಾಗಿರಬಹುದು. ಇಲ್ಲಿ (ಪೀಠದಲ್ಲಿ) ಕುಳಿತು ನಾವು ಹೆಚ್ಚೇನು ಹೇಳಲಾಗದು. ಅವರು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ, ನ್ಯಾಯಮೂರ್ತಿಗಳಿಗೂ ಅವರು ಗೌರವಾನ್ವಿತ ಮುಖ್ಯಮಂತ್ರಿ. ಅವರಿಗೂ ನಾವು ಗೌರವ ಕೊಡಲ್ಲ ಎಂದರೆ ಹೇಗೆ. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹಾಗೆಲ್ಲಾ ಮಾತನಾಡಬಾರದು ಎಂದು ನ್ಯಾಯಮೂರ್ತಿಗಳು ಮನವಿ ಮಾಡಿದ್ದಾರೆ ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ” ಎಂದರು.

“ನೀ ಬರಲಿ, ಬಿಡು ರಾಮ ಜನ್ಮಭೂಮಿ ನಿನ್ನದಲ್ಲ ಮಗನೇ..” ಎಂದು ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ಹೇಳಿದ್ದಾರೆ. ಅವರಿಗೆ ನಾವು ಮತ ಹಾಕುತ್ತೇವೋ, ಇಲ್ಲವೋ ಅವರು ನಮ್ಮ ಮುಖ್ಯಮಂತ್ರಿ. ಏಕವಚನದಲ್ಲಿ ಮಾತನಾಡುವುದು ಶೋಭೆ ತರುವಂಥದಲ್ಲ. ಅವರಾಗಲಿ, ನೀವಾಗಲಿ ಹೀಗೆ ಮಾತನಾಡುವಂತಿಲ್ಲ” ಎಂದರು.

“ಅವರ ನೀತಿಯನ್ನು ನಾವು ಇಷ್ಟ ಪಡುತ್ತೇವೋ ಇಲ್ಲವೋ, ಅವರು ನಮ್ಮ ಮುಖ್ಯಮಂತ್ರಿ. ಅವರನ್ನು ಬಿಟ್ಟು ನಮಗೆ ಬೇರೆ ಮಖ್ಯಮಂತ್ರಿ ಇದ್ದಾರೆಯೇ. ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯನ್ನು, ನಾವು ಒಪ್ಪಲಿ ಬಿಡಲಿ.. ಅವರು ನಮ್ಮ ರಾಜ್ಯದವರು. ಚುನಾವಣೆಯಲ್ಲಿ ಸೋಲಿಸಿ, ಅದು ಬೇರೆ ಮಾತು” ಎಂದರು.

“ಮಹಾಭಾರತದಲ್ಲಿ ಒಂದು ಕಡೆ ಯುದಿಷ್ಠಿರ ಕೌರವರನ್ನು ಕುರಿತು ಹೇಳುತ್ತಾನೆ ಹೊರಗಿನವರು ಬಂದಾಗ ನಾವೆಲ್ಲರೂ ಒಂದೇ, ನಮ್ಮೊಳಗೆ ನಾವು ಬೇರೆ ಬೇರೆ ಇರಬಹುದು ಎನ್ನುತ್ತಾನೆ. ರಾಜ, ರಾಜ್ಯ, ಸರ್ಕಾರದ ಬಗ್ಗೆ ಗೌರವ ಕಡಿಮೆಯಾಗಬಾರದು. ಇದು ಬೇರೆಯ ರೀತಿಯಲ್ಲಿ ಪರಿಣಾಮ ಉಂಟು ಮಾಡುತ್ತದೆ. ಶಾಲೆಯ ಮಕ್ಕಳು ಇದೆಲ್ಲವನ್ನೂ ನೋಡುತ್ತಾರೆ” ಎಂದರು.

ಇನ್ನೊಂದು ಘಟನೆ ಉಲ್ಲೇಖಿಸಿದ ಪೀಠವು “ಮಾಜಿ ಪ್ರಧಾನಿ ʼಇಂದಿರಾ ಜವಾಬ್‌ ದೋʼ ಎಂಬ ಪುಸ್ತಕಕ್ಕೆ ಮುನ್ನುಡಿ ಬರೆಯಲು ವಾಜಪೇಯಿ ಅವರನ್ನು ಕೇಳಲಾಗಿತ್ತಂತೆ. ಆಗ ವಾಜಪೇಯಿ ಅವರು ಒಂದು ಷರತ್ತು ವಿಧಿಸಿದ್ದರಂತೆ. ಅದೇನೆಂದರೆ ʼಇಂದಿರಾಜೀ ಜವಾಬ್‌ ದೋʼ ಎಂದು ಪುಸ್ತಕದ ಹೆಸರು ಬದಲಿಸಿದರೆ ಮುನ್ನುಡಿ ಬರೆಯುವುದಾಗಿ ಹೇಳಿದ್ದರಂತೆ. ಇದು ಮೇಲ್ಪಂಕ್ತಿ” ಎಂದು ಉದಾಹರಿಸಿದರು.

“ಮುಖ್ಯಮಂತ್ರಿ, ಪ್ರಧಾನ ಮಂತ್ರಿಗೆ ಬೇಕೆಂದ ರೀತಿಯಲ್ಲಿ ಮಾತನಾಡಬಾರದು. ಅವರೆಲ್ಲಾ ನಮ್ಮ ಮಂತ್ರಿಗಳು. ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು. ಇಲ್ಲವಾದಲ್ಲಿ ಎಫ್‌ಐಆರ್‌ಗೆ ನಾನು ತಡೆಯಾಜ್ಞೆ ವಿಧಿಸುವುದಿಲ್ಲ. ಹೀಗೆಲ್ಲಾ ಮಾತಾಡಿದರೆ ರಾಜ್ಯ ನಡೆಯುವುದು ಹೇಗೆ? ಯಾರೂ ಹೀಗೆ ಮಾತನಾಡಬಾರದು. ಸ್ವಲ್ಪ ಗಮನ ಇಟ್ಟುಕೊಳ್ಳಿ. ಇವತ್ತು ಒಂದು ಪಕ್ಷ, ನಾಳೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದುವೇ ನಮ್ಮ ದೇಶದ ಸೌಂದರ್ಯ. ನೀವು (ಅರ್ಜಿದಾರರ ವಕೀಲ) ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು” ಎಂದು ಪೀಠ ಹೇಳಿತು.

ಅಂತಿಮವಾಗಿ ಪೀಠವು ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಆದೇಶಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರವಾಗಿ ವಕೀಲ ಪವನ್‌ ಚಂದ್ರ ಶೆಟ್ಟಿ ಎಚ್., ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು ವಾದಿಸಿದರು.

ಪ್ರಕರಣದ ಹಿನ್ನೆಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಅನಂತಕುಮಾರ್‌ ಹೆಗ್ಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಯಲ್ಲಿಐಪಿಸಿ ಸೆಕ್ಷನ್‌ಗಳಾದ 153, 153ಎ, 505(2) ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ವಜಾ ಕೋರಿ ಹೆಗ್ಡೆ ಹೈಕೋರ್ಟ್‌ ಕದ ತಟ್ಟಿದ್ದಾರೆ.