Brij Bhushan Sharan Singh facebook
ಸುದ್ದಿಗಳು

ಮಹಿಳಾ ಕುಸ್ತಿಪಟು ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ನಾನು ದೆಹಲಿಯಲ್ಲಿ ಇರಲಿಲ್ಲ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಮರ್ಥನೆ

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರು ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

Bar & Bench

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯಬೇಕು ಎಂದು ಬಿಜೆಪಿ ಸಂಸದ ಹಾಗೂ ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೋರಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರೋಪ ನಿಗದಿಗೊಳಿಸುವ ಆದೇಶವನ್ನು ದೆಹಲಿ ನ್ಯಾಯಾಲಯ ಗುರುವಾರ ಮುಂದೂಡಿದೆ.

ತನ್ನ ವಿರುದ್ಧ ದೂರು ನೀಡಿರುವ ಕುಸ್ತಿಪಟುಗಳಲ್ಲಿ ಒಬ್ಬರು ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ತಾನು ದೆಹಲಿಯಲ್ಲಿ ಇರಲಿಲ್ಲ ಎಂದು ಸಿಂಗ್‌ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್ ಅವರು ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶ ಕಾಯ್ದಿರಿಸಿದರು. ಏಪ್ರಿಲ್ 26ರಂದು ನ್ಯಾಯಾಲಯ ಆದೇಶ ಪ್ರಕಟಿಸಲಿದೆ.

ಆದರೆ ಸಿಂಗ್‌ ಮನವಿಗೆ ಪ್ರಾಸಿಕ್ಯೂಷನ್‌ ವಿರೋಧ ವ್ಯಕ್ತಪಡಿಸಿತು. ಹೆಚ್ಚಿನ ತನಿಖೆ ನಡೆಸಬೇಕೆಂದು ಕೇಳುತ್ತಿರುವುದು ಪ್ರಕರಣವನ್ನು ವಿಳಂಬಗೊಳಿಸುವ ತಂತ್ರ ಎಂದಿತು.   

ನಿರ್ದಿಷ್ಟವಾಗಿ, ಕೆಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಅವರನ್ನು ಹಿಂಬಾಲಿಸುವಿಕೆ, ಮಹಿಳೆಯರ ಘನತೆಗೆ ಧಕ್ಕೆ ಹಾಗೂ ಕ್ರಿಮಿನಲ್‌ ಬೆದರಿಕೆಯ ಆರೋಪ ಎದುರಿಸುತ್ತಿರುವ ಸಿಂಗ್‌ ವಿರುದ್ಧ ನ್ಯಾಯಾಲಯ ಇಂದು ಆರೋಪ ನಿಗದಿಗೊಳಿಸಬೇಕಿತ್ತು.

ಸಿಂಗ್ ವಿರುದ್ಧ ಆರು ಕುಸ್ತಿಪಟುಗಳು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಐಪಿಸಿ ಸೆಕ್ಷನ್‌  354 (ಘನತೆಗೆ ಧಕ್ಕೆ), 354ಎ (ಲೈಂಗಿಕ ಛಾಯೆಯ ಮಾತುಗಳು), 354 ಡಿ (ಹಿಂಬಾಲಿಸುವಿಕೆ) ಹಾಗೂ 506 (1) (ಕ್ರಿಮಿನಲ್‌ ಬೆದರಿಕೆ) ಅಡಿಯಲ್ಲಿ ಸಿಂಗ್ ವಿರುದ್ಧ ಜೂನ್ 15, 2023 ರಂದು, ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರುದಾರರು ಈ ಹಿಂದೆ ಸುಪ್ರೀಂ ಕೋರ್ಟ್‌ಮೊರೆ ಹೋದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟು ಕೂಡ ಸಿಂಗ್ ವಿರುದ್ಧ ಆರೋಪ ಮಾಡಿದ್ದರು. ಆದರೆ ಆಕೆ ನಂತರ ತನ್ನ ದೂರನ್ನು ಹಿಂಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸಿಂಗ್‌ ವಿರುದ್ಧ ಹೂಡಲಾಗಿದ್ದ ಪೋಕ್ಸೊ ಪ್ರಕರಣವನ್ನು ದೆಹಲಿ ಪೊಲೀಸರು ರದ್ದುಗೊಳಿಸಿದ್ದರು.