Chaitra Kundapur 
ಸುದ್ದಿಗಳು

ಬಿಜೆಪಿ ಟಿಕೆಟ್‌ ಪ್ರಕರಣ: ಹಿಂದೂ ಕಾರ್ಯಕರ್ತೆ ಚೈತ್ರಾ, ಶ್ರೀಕಾಂತ್‌ಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲದಿಂದ ಜಾಮೀನು

ಚೈತ್ರಾ ಮತ್ತು ಶ್ರೀಕಾಂತ್‌ಗೆ ಜಾಮೀನು ಮಂಜೂರಾಗುವುದರೊಂದಿಗೆ ಪ್ರಕರಣದ ಏಳೂ ಆರೋಪಿಗಳಿಗೆ ಜಾಮೀನು ಮಂಜೂರಾದಂತಾಗಿದೆ.

Bar & Bench

ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಮತ್ತು ಏಳನೇ ಆರೋಪಿ ಶ್ರೀಕಾಂತ್‌ ಅವರಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.

ಚೈತ್ರಾ ಮತ್ತು ಶ್ರೀಕಾಂತ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಶ್ರೇಯಾಂಶ್‌ ದೊಡ್ಡಮನಿ ಅವರು ಪುರಸ್ಕರಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರ/ಆರೋಪಿಗಳು ಇಬ್ಬರ ಭದ್ರತೆ, ತಲಾ ಒಂದು ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್‌ ನೀಡಬೇಕು. ಬೆಂಗಳೂರು ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ಮ್ಯಾಜಿಸ್ಟ್ರೇಟ್‌ ವಿಧಿಸಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ್‌ಗೆ ಜಾಮೀನು ಮಂಜೂರಾಗುವುದರೊಂದಿಗೆ ಪ್ರಕರಣದ ಏಳೂ ಆರೋಪಿಗಳಿಗೆ ಜಾಮೀನು ಮಂಜೂರಾದಂತಾಗಿದೆ.

ಚೈತ್ರಾ ಮತ್ತು ಶ್ರೀಕಾಂತ್‌ ಪ್ರತಿನಿಧಿಸಿದ್ದ ವಕೀಲ ಹರ್ಷ ಮುತಾಲಿಕ್‌ ಅವರು ಪ್ರಕರಣದ ತನಿಖೆ ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪವನ್ನು ರುಜುವಾತುಪಡಿಸಲಾಗಿಲ್ಲ. ಇದು ವಿಚಾರಣೆಯಿಂದ ಹೊರಬರಬೇಕು. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಹಿಂದೂ ಕಾರ್ಯಕರ್ತೆ ಚೈತ್ರಾ, ಗಗನ್‌, ಅಭಿನವ ಹಾಲಶ್ರೀ, ರಮೇಶ್‌, ಪ್ರಜ್ವಲ್, ಧನರಾಜ್‌ ಮತ್ತು ಶ್ರೀಕಾಂತ್‌ ಅವರ ವಿರುದ್ಧ ಬೆಂಗಳೂರಿನ ಬಂಡೇಪಾಳ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 170, 406, 419, 420, 506 ಮತ್ತು 120ಬಿ ಅಡಿ ಪ್ರಕರಣ ದಾಖಲಾಗಿದೆ.