City civil court Complex, Bengaluru  
ಸುದ್ದಿಗಳು

ಬಿಜೆಪಿ ಟಿಕೆಟ್ ಹೆಸರಲ್ಲಿ ವಂಚನೆ: ಸ್ವಾಮೀಜಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಬೆಂಗಳೂರು ನ್ಯಾಯಾಲಯ

57ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರಾದ ಟಿ ಗೋಂವಿದಯ್ಯ ಅವರು ಸರ್ಕಾರಕ್ಕೆ ಶನಿವಾರ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದ್ದಾರೆ.

Bar & Bench

ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿರುವ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆ. 19ಕ್ಕೆ (ಮಂಗಳವಾರ) ವಿಚಾರಣೆ ಮುಂದೂಡಿದೆ.

57ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರಾದ ಟಿ ಗೋಂವಿದಯ್ಯ ಅವರು ಸರ್ಕಾರಕ್ಕೆ ಶನಿವಾರ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದ್ದಾರೆ.

ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಹೊಸಪೇಟೆಯ ಹಾಲಶ್ರೀ ಸ್ವಾಮೀಜಿ (ಜಿ ಎಂ ಅಭಿನವ ಶ್ರೀ ಹಾಲವೀರಪ್ಪಜ್ಜ) ಅವರು ದೂರುದಾರ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ₹ 1.50 ಕೋಟಿ ಪಡೆದ  ಆರೋಪ ಎದುರಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಅವರಿಂದ  ಐದು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣದ ಆರೋಪಿಗಳಾದ  ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಶ್ರೀಕಾಂತ್‌, ರಮೇಶ್‌, ಗಗನ್‌, ಪ್ರಜ್ವಲ್‌ ಹಾಗೂ ಧನರಾಜ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಹತ್ತು ದಿನಗಳ ಕಾಲ ಸಿಸಿಬಿ ವಶಕ್ಕೆ ಒಪ್ಪಿಸಿತ್ತು.

ಇತ್ತ ಪ್ರಕರಣದ ಮೂರನೇ ಆರೋಪಿ, ದೂರುದಾರರಿಂದ 1.50 ಕೋಟಿ ಹಣ ಪಡೆದ ಆರೋಪೆ ಎದುರಿಸುತ್ತಿರುವ ಸ್ವಾಮೀಜಿ ತಲೆ ಮರೆಸಿಕೊಂಡಿದ್ದು ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ.  ರಾಜಕೀಯ ಕಾರಣಕ್ಕೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ. ತಾವು ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಎಫ್‌ಐಆರ್‌ ದಾಖಲಿಸುವಲ್ಲಿ ಅಗಾಧ ಅಂತರದ ಮತ್ತು ವಿವರಿಸಲಾಗದಂತಹ ವಿಳಂಬ ಉಂಟಾಗಿದ್ದು ತಮ್ಮ ವಿರುದ್ಧ ಕಟ್ಟುಕತೆ ಹೆಣೆಯಲಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಕಾರಣಗಳಿಗಾಗಿ ತಮಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಸ್ವಾಮೀಜಿ ಅರ್ಜಿಯಲ್ಲಿ ವಿವರಿಸಿದ್ದಾರೆ.