Supreme court of India, Firecrackers 
ಸುದ್ದಿಗಳು

ದೆಹಲಿಯಲ್ಲಿ ಪಟಾಕಿ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಜೆಪಿಯ ಮನೋಜ್ ತಿವಾರಿ

ಎಲ್ಲಾ ರೀತಿಯ ಪಟಾಕಿಗಳ ತಯಾರಿಕೆ, ಸಂಗ್ರಹ, ಮಾರಾಟ ಹಾಗೂ ಬಳಕೆಯನ್ನು ಜನವರಿ 1, 2023 ರವರೆಗೆ ಸಂಪೂರ್ಣವಾಗಿ ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಸೆಪ್ಟೆಂಬರ್ 14ರಂದು ಆದೇಶ ಹೊರಡಿಸಿತ್ತು.

Bar & Bench

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನವರಿ 2023 ರವರೆಗೆ ಪಟಾಕಿ ಮಾರಾಟ, ಖರೀದಿ ಮತ್ತು ಬಳಕೆ ನಿಷೇಧಿಸಿರುವ ದೆಹಲಿ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಜೆಪಿ ನಾಯಕ ಮನೋಜ್ ತಿವಾರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದೆಹಲಿ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮತ್ತು ಈಶಾನ್ಯ ದೆಹಲಿ ಸಂಸದರೂ ಆಗಿರುವ ಅವರು ಅನುಮತಿ ನೀಡಬಹುದಾದ ಪಟಾಕಿಗಳಿಗೆ ತಡೆ ಹಿಡಿಯದಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಎಲ್ಲಾ ರೀತಿಯ ಪಟಾಕಿಗಳ ತಯಾರಿಕೆ, ಸಂಗ್ರಹ, ಮಾರಾಟ ಹಾಗೂ ಬಳಕೆಯನ್ನು ಜನವರಿ 1, 2023 ರವರೆಗೆ ಸಂಪೂರ್ಣವಾಗಿ ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಸೆಪ್ಟೆಂಬರ್ 14ರಂದು ಆದೇಶ ಹೊರಡಿಸಿತ್ತು.

ವಕೀಲ ಶಶಾಂಕ್ ಶೇಖರ್ ಝಾ ಅವರು ತುರ್ತು ಪಟ್ಟಿಗಾಗಿ ಶುಕ್ರವಾರ ಬೆಳಿಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಅವರ ಮುಂದೆ ಅರ್ಜಿ ಪ್ರಸ್ತಾಪಿಸಿದರು. ಆಗ ಅಕ್ಟೋಬರ್ 10 ರಂದು ವಿಚಾರಣೆ ನಡೆಸುವುದಾಗಿ ಸಿಜೆಐ ನೇತೃತ್ವದ ಪೀಠ ಹೇಳಿತು.

ನಿಷೇಧ ಮನಸೋಇಚ್ಛೆಯಿಂದ ಕೂಡಿದ್ದು ವ್ಯಾಪಾರಿಗಳ ಜೀವನೋಪಾಯಕ್ಕೆ ಅಡ್ಡಿಯಾಗುತ್ತದೆ ಎಂದಿರುವ ಅರ್ಜಿ, ಸಂಪೂರ್ಣ ನಿಷೇಧದ ಬದಲಿಗೆ ಸಮತೋಲನ ಸಾಧಿಸಬೇಕು ಎಂದು ಸುಪ್ರೀಂ ಕೋರ್ಟ್‌ 2021ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದೆ. ಡಿಪಿಸಿಸಿ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿಯೂ ಸಹ ಅರ್ಜಿಯೊಂದು ದಾಖಲಾಗಿದೆ. ಹಸಿರು ಪಟಾಕಿಗಳ ಮಾರಾಟ, ಖರೀದಿ ಮತ್ತು ಸಂಗ್ರಹಣೆಯಲ್ಲಿ ತೊಡಗಿರುವ ಎರಡು ಸಂಸ್ಥೆಗಳು ಈ ಅರ್ಜಿ ದಾಖಲಿಸಿವೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಗಾಳಿಯ ಗುಣಮಟ್ಟ ಮಧ್ಯಮ ರೀತಿಯಲ್ಲಿರುವ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಗೆ ಸ್ಪಷ್ಟ ಅನುಮತಿ ನೀಡಿರುವುದರಿಂದ ಡಿಪಿಸಿಸಿ ನಿರ್ದೇಶನಗಳು ನ್ಯಾಯಾಂಗ ಆದೇಶಗಳಿಗೆ ವಿರುದ್ಧ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

ಬುಧವಾರ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಅರ್ಜಿಯ ವಿಚಾರಣೆ ನಡೆಸಿದಾಗ, ಸುಪ್ರೀಂ ಕೋರ್ಟ್ ಇದೇ ರೀತಿಯ ಅರ್ಜಿಯನ್ನು ವ್ಯವಹರಿಸುತ್ತಿದೆಯೇ ಎಂದು ತಿಳಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದು.