ಇತ್ತೀಚೆಗೆ ನಡೆದ ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ವಿಜೇತರಾಗಿರುವ ಪ್ರಿಯಾಂಕಾ ಗಾಂಧಿ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿಯ ನವ್ಯಾ ಹರಿದಾಸ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಲೋಕಸಭಾ ಉಪಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ನವ್ಯಾ ಅವರು 5,12,399 ಮತಗಳಿಂದ ಪರಾಭವಗೊಂಡಿದ್ದರು. ಆ ಮೂಲಕ ಸಿಪಿಐನ ಸತ್ಯನ್ ಮೊಕೇರಿ ನಂತರದ ಮೂರನೇ ಸ್ಥಾನಕ್ಕೆ ನವ್ಯಾ ನೂಕಲ್ಪಟ್ಟಿದ್ದರು.
ಪ್ರಿಯಾಂಕಾ ಗಾಂಧಿ ಅವರು ತಮ್ಮ ನಾಮಪತ್ರದಲ್ಲಿ ಅವರ ಹಾಗೂ ಅವರ ಕುಟುಂಬದ ಸದಸ್ಯರ ಆಸ್ತಿಯ ವಿವರಗಳನ್ನು ಬಚ್ಚಿಟ್ಟಿದ್ದಾರೆ. ಆ ಮೂಲಕ ಮತದಾರರಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ಕತ್ತಲೆಯಲ್ಲಿಟ್ಟು ಅವರ ಮತ ಪಡೆದಿದ್ದಾರೆ. ಭ್ರಷ್ಟ ಕ್ರಿಯೆಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿರುವುದರಿಂದ ಇದು ಪ್ರಜಾಪ್ರತಿನಿಧಿ ಕಾಯಿದೆಗೆ ವಿರುದ್ಧವಾದ ನಡೆ ಎಂದು ನವ್ಯಾ ಆಕ್ಷೇಪಿಸಿದ್ದಾರೆ.
ಪ್ರಿಯಾಂಕಾ ನಾಮಪತ್ರವು ಚುನಾವಣಾ ಕಾಯಿದೆ ಮತ್ತು ಚುನಾವಣಾ ಪ್ರಕ್ರಿಯೆ ನಿಯಮಗಳಿಗೆ ವಿರುದ್ಧವಾಗಿವೆ. ಹೀಗಾಗಿ, ಪ್ರಿಯಾಂಕಾ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಹರಿದಾಸ್ ಕೋರಿದ್ದಾರೆ.