Subramaniam Swamy and Bombay High Court
Subramaniam Swamy and Bombay High Court 
ಸುದ್ದಿಗಳು

ಪಂಢರಾಪುರ ದೇಗುಲಗಳ ಕಾಯಿದೆ ರದ್ದತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಸುಬ್ರಮಣ್ಯಂ ಸ್ವಾಮಿ ಅರ್ಜಿ

Bar & Bench

ಪಂಢರಾಪುರ ದೇಗುಲದ ಆಡಳಿತವನ್ನು ಮಹಾರಾಷ್ಟ್ರ ಸರ್ಕಾರವು ನಿರಂಕುಶವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಆರೋಪಿಸಿ ಪಂಢರಾಪುರ ದೇವಾಲಯಗಳ ಕಾಯಿದೆ-1973 ಅನ್ನು ರದ್ದುಪಡಿಸಲು ಕೋರಿ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಸುಬ್ರಮಣ್ಯಂ ಸ್ವಾಮಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ವಕೀಲರಾದ ಮನೋಹರ್ ಶೆಟ್ಟಿ, ಸತ್ಯ ಸಬರ್ವಾಲ್, ವಿಶೇಷ್ ಕನೋಡಿಯಾ ಮತ್ತು ಶಂತನು ಶೆಟ್ಟಿ ಅವರ ಮೂಲಕ ಸಲ್ಲಿಸಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಕಾಯಿದೆ ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಲೋಪದೋಷಗಳ ಪರಿಹಾರಕ್ಕಾಗಿ ದೇಗುಲ ನಿರ್ವಹಣೆಯನ್ನು ಸರ್ಕಾರ ವಹಿಸಿಕೊಂಡಿದ್ದರೂ ಅದು ನಿವಾರಣೆಯಾದ ಬಳಿಕ ದೇಗುಲ ಹೊಣೆಗಾರಿಕೆಯನ್ನು ಸಂಬಂಧಪಟ್ಟ ವ್ಯಕ್ತಿಗೆ ಹಸ್ತಾಂತರಿಸಬೇಕು. ಲೋಪದೋಷ ತೀರಿದ ಬಳಿಕವೂ ಸ್ವಾಧೀನತೆ ಮುಂದುವರಿಸುವುದು ಎಂದರೆ ಅದು ಮಾಲೀಕತ್ವವನ್ನು ಕಸಿದುಕೊಳ್ಳುವುದು ಅಥವಾ ಸಂವಿಧಾನ ಒದಗಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಮನಾಗಿರುತ್ತದೆ.

  • ಪಂಢರಾಪುರ ದೇವಸ್ಥಾನದ ಮೇಲೆ ಹಿಡಿತ ಸಾಧಿಸುವ ಮೂಲಕ ಸರ್ಕಾರವು ಹಿಂದೂಗಳಿಗೆ ತಮ್ಮ ಧರ್ಮ ಪ್ರತಿಪಾದಿಸುವ, ಆಚರಣೆ ಮಾಡುವ ಹಾಗೂ ಪ್ರಚಾರ ಮಾಡುವ, ಹಿಂದೂ ಧಾರ್ಮಿಕ ದತ್ತಿಯನ್ನು ನಿರ್ವಹಿಸುವ ಹಕ್ಕುಗಳನ್ನು ಹಾಗೂ ಧಾರ್ಮಿಕ ವಿಷಯ ಕುರಿತಾದ ಸ್ವಂತ ವ್ಯವಹಾರಗಳನ್ನು ಕಸಿದುಕೊಂಡಿದೆ.

  • ದೇವಾಲಯ ನಿರ್ವಹಿಸಲು ಧಾರ್ಮಿಕ ಸಮುದಾಯದೊಳಗೆ ಇರುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಾಯಿದೆ ನಿರಾಕರಿಸಿದೆ.

  • ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರೋಹಿತರ ಪಾತ್ರವು ಸಂಪೂರ್ಣವಾಗಿ ಧಾರ್ಮಿಕ ವಿಷಯವಾಗಿದ್ದು ಇದರಲ್ಲಿ ಮಾಡುವ ಹಸ್ತಕ್ಷೇಪವು ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆರಾಧನಾ ಸ್ವಾತಂತ್ರ್ಯಹಾಗೂ ಇದರೊಂದಿಗೆ ಸಹವಾಚನ ಮಾಡಲಾದ 25 ಮತ್ತು 26 ನೇ ವಿಧಿಗಳ ಉಲ್ಲಂಘನೆಯಾಗುತ್ತದೆ.

  • ಅರ್ಜಿದಾರರ ಮತ್ತು ಹಿಂದೂ ಸಮುದಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿರುವ ಕಾರಣಕ್ಕೆ ಕಾಯಿದೆಯನ್ನು ರದ್ದುಗೊಳಿಸಬೇಕು.