Lawyers 
ಸುದ್ದಿಗಳು

ವಿಚಾರಣಾಧೀನ ನ್ಯಾಯಾಲಯದ ಬೇಸಿಗೆ ಕಲಾಪದಲ್ಲಿ ಭಾಗವಹಿಸುವ ವಕೀಲರಿಗೆ ಕಪ್ಪು ಕೋಟ್‌ ಧಾರಣೆ ಕಡ್ಡಾಯವಲ್ಲ: ಕೆಎಸ್‌ಬಿಸಿ

ಪುರುಷ ವಕೀಲರು ಬಿಳಿ ಶರ್ಟ್‌, ಕಪ್ಪು ಅಥವಾ ಬೂದು ಬಣ್ಣದ ಪ್ಯಾಂಟ್‌, ಮಹಿಳಾ ವಕೀಲರು ಸೀರೆ ಅಥವಾ ಉದ್ದನೆಯ ಸ್ಕರ್ಟ್‌ ಅಥವಾ ಪಂಜಾಬಿ ಉಡುಗೆ ಅಥವಾ ಚೂಡಿದಾರ್ ಕುರ್ತಾ ಅಥವಾ ಸಲ್ವಾರ್ ಕುರ್ತಾ ಬಿಳಿ ಬ್ಯಾಂಡ್‌ನೊಂದಿಗೆ ಕಾಣಿಸಿಕೊಳ್ಳಬಹುದು.

Bar & Bench

ಬೇಸಿಗೆಯ ಕಾಲದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳನ್ನು ಹೊರತುಪಡಿಸಿ ವಿಚಾರಣಾಧೀನ ನ್ಯಾಯಾಲಯಗಳನ್ನು ಪ್ರವೇಶಿಸುವ, ವಾದ ಮಂಡಿಸುವ ಅಥವಾ ಕಲಾಪಗಳಲ್ಲಿ ಸಕ್ರಿಯರಾಗುವ ವಕೀಲರು ಕಪ್ಪು ಕೋಟ್ ಧರಿಸುವುದು ಕಡ್ಡಾಯವಲ್ಲ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ರಾಜ್ಯದ ವಕೀಲರ ಸಂಘದ ಅಧ್ಯಕ್ಷರಿಗೆ ಈಚೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಕೆಎಸ್‌ಬಿಸಿ ಅಧ್ಯಕ್ಷ ಎಚ್‌ ಎಲ್‌ ರಘು ಅವರು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿದ್ದು, ಭಾರತೀಯ ವಕೀಲರ ಪರಿಷತ್‌ (ಬಿಸಿಐ) ನಿಯಮಗಳ ಅಧ್ಯಾಯ 6ರ ಭಾಗ 4ರಲ್ಲಿ ವಿವರಿಸಿರುವಂತೆ ವಕೀಲ ವೃಂದಕ್ಕೆ ಈ ಕುರಿತ ಮಾಹಿತಿ ಒದಗಿಸಲು ಈ ನೋಟಿಸ್‌ ಅನ್ನು ಎಲ್ಲಾ ವಕೀಲರ ಸಂಘದ ನೋಟಿಸ್‌ ಬೋರ್ಡ್‌ನಲ್ಲಿ ಹಾಕುವಂತೆ ಸಂಘದ ಅಧ್ಯಕ್ಷರಿಗೆ ಕೋರಿದ್ದಾರೆ.

ವಕೀಲರ ಕಾಯಿದೆ 1961ರ ಸೆಕ್ಷನ್‌ 49 (1) (ಜಿಜಿ) ಅಡಿಯಲ್ಲಿ ರಚಿಸಲಾಗಿರುವ ನಿಯಮಗಳಂತೆ, ಪುರುಷ ವಕೀಲರು ಬಿಳಿ ಶರ್ಟ್‌, ಕಪ್ಪು ಅಥವಾ ಬೂದು ಬಣ್ಣದ ಪ್ಯಾಂಟ್‌ ಮತ್ತು ಬಿಳಿ ಬ್ಯಾಂಡ್‌ನೊಂದಿಗೆ ಕಲಾಪದಲ್ಲಿ ಭಾಗವಹಿಸಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮಹಿಳಾ ವಕೀಲರು ಸೀರೆ ಅಥವಾ ಉದ್ದನೆಯ ಸ್ಕರ್ಟ್‌ಗಳಲ್ಲಿ (ಬಿಳಿ ಅಥವಾ ಕಪ್ಪು ಅಥವಾ ಯಾವುದೇ ಮುದ್ರೆ ಅಥವಾ ವಿನ್ಯಾಸವಿಲ್ಲದ) ಅಥವಾ ಪಂಜಾಬಿ ಉಡುಗೆ ಅಥವಾ ಚೂಡಿದಾರ್ ಕುರ್ತಾ ಅಥವಾ ಸಲ್ವಾರ್ ಕುರ್ತಾ (ಬಿಳಿ ಅಥವಾ ಕಪ್ಪು) ಬಿಳಿ ಬ್ಯಾಂಡ್‌ನೊಂದಿಗೆ ಕಾಣಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದ್ದಾರೆ.