The academicians who filed a petition before Supreme Court
The academicians who filed a petition before Supreme Court  
ಸುದ್ದಿಗಳು

ತನಿಖೆಗೊಳಪಟ್ಟಿರುವ ವಿದ್ವಾಂಸರ ಡಿಜಿಟಲ್ ಸಾಧನ ಮರಳಿಸುವುದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಆಕ್ಷೇಪ

Bar & Bench

ತಾನು ಮುಟ್ಟುಗೋಲು ಹಾಕಿಕೊಂಡಿರುವ ವಿದ್ವಾಂಸರ ವೈಯಕ್ತಿಕ ಡಿಜಿಟಲ್‌ ಮತ್ತು ಎಲೆಕ್ಟ್ರಾನಿಕ್‌ ಸಾಧನಗಳನ್ನು- ಅವುಗಳ ಸೂಕ್ಷ್ಮತೆ ಮತ್ತು ಪ್ರಕರಣಗಳ ತನಿಖಾ ಹಂತ ಗಮನಿಸಿ- ಹಿಂತಿರುಗಿಸಲು ಕೇಂದ್ರ ಸರ್ಕಾರ ಆಕ್ಷೇಪಿಸಿದೆ. [ರಾಮ್‌ ರಾಮಸ್ವಾಮಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ವೈಯಕ್ತಿಕ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅವುಗಳಲ್ಲಿರುವ ಮಾಹಿತಿ ವಶಪಡಿಸಿಕೊಳ್ಳುವಿಕೆ, ಪರಿಶೀಲನೆ ಹಾಗೂ ಸಂರಕ್ಷಣೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಶಿಕ್ಷಣ ತಜ್ಞರು ಮತ್ತು ಸಂಶೋಧಕರ ಗುಂಪೊಂದು ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

ಸೂಕ್ತ ಪ್ರಕರಣಗಳಲ್ಲಿ, ಹಾಗೆ ವಶಪಡಿಸಿಕೊಂಡಿರುವ ಸಾಧನಗಳ ಹಾರ್ಡ್‌ಡ್ರೈವ್‌ನ ನಕಲು ಪ್ರತಿ ಪಡೆಯಲು ಆರೋಪಿಗಳಿಗೆ ಸಿಆರ್‌ಪಿಸಿ ಸೆಕ್ಷನ್ 451ರ ಅಡಿ ಅನುಮತಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತನಿಖೆ ಬಾಕಿ ಇರುವ ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ವಿಲೇವಾರಿಗಾಗಿ ಆದೇಶ ನೀಡಲು ಸೆಕ್ಷನ್ 451 ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ.

ಆದರೂ ತನಿಖೆಯ ಅಗತ್ಯ ಮತ್ತು ಆಕ್ಷೇಪಾರ್ಹ ಮಾಹಿತಿಯ ವಿವಿಧ ಹಂತದ ಸೂಕ್ಷ್ಮತೆ ಪರಿಗಣಿಸಿ ತನಿಖೆಗೊಳಪಟ್ಟಿರುವ ವ್ಯಕ್ತಿಗಳಿಗೆ ಅಂತಹ ದಾಖಲೆ ಮರಳಿಸುವ ಕುರಿತು ಬೇಷರತ್‌ ಆದೇಶ ನೀಡುವುದು ಸೂಕ್ತವಲ್ಲ ಎಂದು ಕೇಂದ್ರ ತಿಳಿಸಿದೆ.

ಪ್ರಪಂಚದೆಲ್ಲೆಡೆಯ ನ್ಯಾಯವ್ಯಾಪ್ತಿಗಳಲ್ಲಿ ಗೌಪ್ಯತೆಯ ಹಕ್ಕು ಅಸ್ತಿತ್ವದಲ್ಲಿದ್ದರೂ ಕಾನೂನಿನ ಮೂಲಕ ಅದಕ್ಕೆ ನಿಯಂತ್ರಣ ವಿಧಿಸಲಾಗಿದ್ದು ಬೇಷರತ್‌ ವಿನಾಯಿತಿ ನೀಡುವುದಿಲ್ಲ ಎಂದು ಪ್ರತಿಕ್ರಿಯೆ ವಿವರಿಸಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ನಿವೃತ್ತ ಪ್ರಾಧ್ಯಾಪಕ ಮತ್ತು ಸಂಶೋಧಕ ರಾಮ್ ರಾಮಸ್ವಾಮಿ; ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಸುಜಾತಾ ಪಟೇಲ್; ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಲ್ಲಿ ಸಾಂಸ್ಕೃತಿಕ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮಾಧವ ಪ್ರಸಾದ್; ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ಆಧುನಿಕ ಭಾರತೀಯ ಇತಿಹಾಸ ಬೋಧಿಸುವ ಪ್ರಾಧ್ಯಾಪಕ ಮುಕುಲ್ ಕೇಶವನ್ ಮತ್ತು ಸೈದ್ಧಾಂತಿಕ ಪರಿಸರ ಅರ್ಥಶಾಸ್ತ್ರಜ್ಞ ದೀಪಕ್ ಮಾಲ್ಘಾನ್ ಅವರು ಸಲ್ಲಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಪ್ರತಿಕ್ರಿಯೆ ನೀಡಿದೆ.

ಜನರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಮಾಹಿತಿ ಒಳಗೊಂಡಿರುವ ಸಾಧನಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತನಿಖಾ ಸಂಸ್ಥೆಗಳು ನಡೆಸುವ ಸಂಪೂರ್ಣ ಮಾರ್ಗದರ್ಶನವಿಲ್ಲದ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ತನ್ನ ನಿರ್ದೇಶನಗಳ ಮೂಲಕ ಹದಗೊಳಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸೇರಿದವರು ಅಥವಾ ಪ್ರತಿಷ್ಠಿತ ಲೇಖಕರ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅರ್ಜಿದಾರರು ದೂರಿದ್ದರು.