Judge  
ಸುದ್ದಿಗಳು

ನ್ಯಾಯಾಂಗ ಅಧಿಕಾರಿಯಿಂದ ಕಾನೂನಿನ ಸ್ಪಷ್ಟ ಅಜ್ಞಾನ ಸಹಿಸಲಾಗದು: ಮ್ಯಾಜಿಸ್ಟ್ರೇಟ್‌ ನಡೆಗೆ ಹೈಕೋರ್ಟ್‌ ಕಿಡಿ

ಪೊಲೀಸರಿಂದ ಮ್ಯಾಜಿಸ್ಟ್ರೇಟ್‌ ವರದಿ ಕೇಳಿದ್ದರು. ಆಶ್ಚರ್ಯಕರ ಸಂಗತಿ ಎಂದರೆ ಬ್ಯಾಡರಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ಆಧರಿಸಿ ಮ್ಯಾಜಿಸ್ಟ್ರೇಟ್‌ ಖಾಸಗಿ ದೂರು ಮುಕ್ತಾಯಗೊಳಿಸಿದ್ದರು.

Bar & Bench

ವರದಿ ಸಲ್ಲಿಸುವುದಕ್ಕೆ ಬದಲಾಗಿ ಪೊಲೀಸರು ಎಫ್‌ಐಆರ್‌ ಪ್ರತಿ ಸಲ್ಲಿಸಿದ್ದನ್ನು ಪರಿಗಣಿಸಿ ಖಾಸಗಿ ದೂರನ್ನೇ ಮುಕ್ತಾಯಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನಡೆಗೆ ಅತೃಪ್ತಿ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಹಾಲಿ ಪ್ರಕರಣದಲ್ಲಿ ಪ್ರಕ್ರಿಯೆಯ ಹರಾಕಿರಿಯಾಗಿದೆ ಎಂದು ಕಿಡಿಕಾರಿದೆ. ಅಲ್ಲದೇ, ನ್ಯಾಯಾಂಗ ಅಧಿಕಾರಿಯಿಂದ ಕಾನೂನಿನ ಸ್ಪಷ್ಟ ಅಜ್ಞಾನ ಸಹಿಸಲಾಗದು ಎಂದು ಶುಕ್ರವಾರ ಕಟುವಾಗಿ ನುಡಿದಿದೆ.

ಸಿವಿಲ್‌ ವ್ಯಾಜ್ಯ ಎಂದು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದ್ದ ಬ್ಯಾಡರಹಳ್ಳಿ ಪೊಲೀಸರಿಗೆ ಖಾಸಗಿ ದೂರಿನ ಭಾಗವಾಗಿ ವರದಿ ಸಲ್ಲಿಸುವಂತೆ ಬೆಂಗಳೂರು ಗ್ರಾಮಾಂತರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ನಿರ್ದೇಶಿಸಿದ್ದರು. ಇದರ ಬದಲಿಗೆ ಪೊಲೀಸರು ಎಫ್‌ಐಆರ್‌ ಪ್ರತಿ ಸಲ್ಲಿಸಿದ್ದನ್ನು ಆಧರಿಸಿ ಖಾಸಗಿ ದೂರನ್ನೇ ಮುಕ್ತಾಯಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ಆದೇಶ ಪ್ರಶ್ನಿಸಿ ಬೆಂಗಳೂರಿನ ಹಾವನೂರು ಲೇಔಟ್‌ನ ಎಂ ಎನ್‌ ರಮೇಶ್‌ ಮತ್ತು ಭರತ್‌ ರಮೇಶ್‌ ಸೌಂದರ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು “ಎಫ್‌ಐಆರ್‌ ದಾಖಲಿಸುವಾಗ ಪೊಲೀಸರು ಯಾವುದೇ ಆದೇಶವನ್ನು ಉಲ್ಲೇಖಿಸಿಲ್ಲ. ಆದೇಶದ ಉಲ್ಲೇಖವಿಲ್ಲದೇ ಬಿಎನ್‌ಎಸ್‌ಎಸ್‌ ಸೆಕ್ಷನ್‌ 175(2) ಅಡಿ ಬ್ಯಾಡರಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇದನ್ನು ಮ್ಯಾಜಿಸ್ಟ್ರೇಟ್‌ ಒಪ್ಪಿಕೊಂಡು, ಖಾಸಗಿ ದೂರನ್ನು ಮುಕ್ತಾಯಗೊಳಿಸಿದ್ದಾರೆ. ಇಲ್ಲಿ ಪ್ರಕ್ರಿಯೆಯ ಹರಾಕಿರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪೊಲೀಸರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರೂ ಅವರು ಸಲ್ಲಿಸಿಲ್ಲ. ಇನ್ನೊಂದೆಡೆ ಮ್ಯಾಜಿಸ್ಟ್ರೇಟ್‌ ಅವರು ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದನ್ನು ಪರಿಗಣಿಸಿ, ಖಾಸಗಿ ದೂರು ಮುಕ್ತಾಯಗೊಳಿಸಿದ್ದಾರೆ. ಹೀಗಾಗಿ, ಖಾಸಗಿ ದೂರು ರದ್ದುಪಡಿಸಿರುವ ಮ್ಯಾಜಿಸ್ಟ್ರೇಟ್‌ ಆದೇಶ ರದ್ದುಪಡಿಸಲಾಗಿದೆ. ಮ್ಯಾಜಿಸ್ಟ್ರೇಟ್‌ ಆದೇಶ ಉಲ್ಲೇಖಿಸದ ಎಫ್‌ಐಆರ್‌ ಅನ್ನು ವಜಾಗೊಳಿಸಲಾಗಿದೆ. ಬೆಂಗಳೂರು ಸಿಜೆಎಂಗೆ ಖಾಸಗಿ ದೂರನ್ನು ಮರಳಿಸಲಾಗಿದ್ದು, ಆದೇಶದಲ್ಲಿನ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ಅನ್ವಯ ಅವರು ಹೊಸದಾಗಿ ಆದೇಶ ಮಾಡಬೇಕು ಎಂದು ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿದೆ.

ನಕಲಿ ದಾಖಲೆ ಸೃಷ್ಟಿಸಿ, ನಿವೇಶನ ಮಾರಾಟ ಮಾಡಿದ ಸಂಬಂಧ ಹಾಸನದ ಚನ್ನರಾಯಪಟ್ಟಣದ ಚಿಕ್ಕ ರಾಮೇಗೌಡರ ವಿರುದ್ಧ ನೀಡಿದ ದೂರನ್ನು ಪೊಲೀಸರು ಪರಿಗಣಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಾವನೂರು ಲೇಔಟ್‌ನ ಎಂ ಎನ್‌ ರಮೇಶ್‌ ಮತ್ತು ಭರತ್‌ ರಮೇಶ್‌ ಸೌಂದರ್ಯ ಅವರು ಖಾಸಗಿ ದೂರಿನ ಮೂಲಕ ಬೆಂಗಳೂರು ಗ್ರಾಮೀಣ ಜಿಲ್ಲೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಮೊರೆ ಹೋಗಿದ್ದರು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇದನ್ನು ಆಧರಿಸಿ, ಮ್ಯಾಜಿಸ್ಟ್ರೇಟ್‌ ಅವರು ಬ್ಯಾಡರಹಳ್ಳಿ ಪೊಲೀಸರಿಂದ ಬಿಎನ್‌ಎಸ್‌ಎಸ್‌ ಸೆಕ್ಷನ್‌ 175(2)ರ ಅಡಿ ವರದಿ ಕೇಳಿದ್ದರು. ಇದರ ಬೆನ್ನಲೇ ಆಶ್ಚರ್ಯಕರ ಸಂಗತಿ ಎಂದರೆ ಬ್ಯಾಡರಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಆನಂತರ ಅದನ್ನು ವರದಿ ಎಂದು ಮ್ಯಾಜಿಸ್ಟ್ರೇಟ್‌ ಮುಂದೆ ಸಲ್ಲಿಸಿದ್ದರು. ವರದಿ ಕೇಳಿದ್ದಕ್ಕೆ ಪೊಲೀಸರು ಎಫ್‌ಐಆರ್‌ ಸಲ್ಲಿಸಿದ್ದಾರೆ ಎಂದು ಕಾನೂನು ಉಲ್ಲಂಘಿಸಿ ಮ್ಯಾಜಿಸ್ಟ್ರೇಟ್‌ ಅವರು ಖಾಸಗಿ ದೂರಿಗೆ ಮುಕ್ತಾಯ ಹಾಡಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.