Karnataka High Court 
ಸುದ್ದಿಗಳು

ಸಾರ್ವಜನಿಕ ಸೇವಕರ ರಕ್ತ, ಬೆವರಿಗೆ ಬೆಲೆ ನೀಡಬೇಕು; ಪರವಾನಗಿ ಪಡೆದ ಸರ್ವೇಯರ್‌ಗಳ ಹೆಚ್ಚುವರಿ ವೇತನ ಪಾವತಿಸಲು ಆದೇಶ

ಅರ್ಜಿದಾರ ಸರ್ವೇಯರ್‌ಗಳ ಸೇವೆಯನ್ನು ಖಚಿತಪಡಿಸಿಕೊಂಡ ಬಳಿಕ ಮೂರು ತಿಂಗಳ ಒಳಗಾಗಿ ಹೆಚ್ಚುವರಿ ವೇತನ ಪಾವತಿಸಬೇಕು. ಪಾವತಿ ಪ್ರಕ್ರಿಯೆ ವಿಳಂಬ ಮಾಡಿದರೆ ಶೇ 1ರಷ್ಟು ಬಡ್ಡಿ ತೆರಬೇಕು ಎಂದು ಆದೇಶಿಸಿರುವ ನ್ಯಾಯಾಲಯ.

Bar & Bench

“ನಮ್ಮದು ಸಾಂವಿಧಾನಿಕವಾಗಿ ದೀಕ್ಷೆ ಪಡೆದ ಕಲ್ಯಾಣ ರಾಜ್ಯದ ವ್ಯವಸ್ಥೆ. ಇಲ್ಲಿ ನಾಗರಿಕರಿಗೆ ನೀಡಿದ ಆಶ್ವಾಸನೆ ಮತ್ತು ಭರವಸೆಗಳನ್ನು ಆಡಳಿತ ಸರ್ಕಾರಗಳು ನೆರವೇರಿಸಬೇಕು. ಅವು ಸಾರ್ವಜನಿಕ ಸೇವಕರ ರಕ್ತ ಮತ್ತು ಬೆವರಿಗೆ ಬೆಲೆ ನೀಡಬೇಕು ಮತ್ತು ತಾವು ಕೊಟ್ಟ ಮಾತಿನಿಂದ ತಪ್ಪಿಸಿಕೊಳ್ಳಲು ಆಗದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಪರವಾನಗಿ ಪಡೆದ ಸರ್ವೇಯರ್‌ಗಳ ಹೆಚ್ಚುವರಿ ವೇತನ ಪಾವತಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಬಂಟ್ವಾಳ ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿನ ಸರ್ವೇ ವಿಭಾಗದ ಕೆ ಬಿ ಲೋಕೇಶ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು 1,131 ಪರವಾನಗಿ ಹೊಂದಿದ ಸರ್ವೇಯರ್‌ಗಳು (ಭೂ ಮಾಪಕರು) ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಡಿ.ಹುದ್ದಾರ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಅರ್ಜಿದಾರ ಸರ್ವೇಯರ್‌ಗಳ ಸೇವೆಯನ್ನು ಖಚಿತಪಡಿಸಿಕೊಂಡ ಬಳಿಕ ಮೂರು ತಿಂಗಳ ಒಳಗಾಗಿ ಹೆಚ್ಚುವರಿ ವೇತನ ಪಾವತಿಸಬೇಕು. ಪಾವತಿ ಪ್ರಕ್ರಿಯೆ ವಿಳಂಬ ಮಾಡಿದರೆ ಶೇ 1ರಷ್ಟು ಬಡ್ಡಿ ತೆರಬೇಕು. ಈ ಮೊತ್ತವನ್ನು ಸರ್ವೇಯರ್‌ಗಳಿಗೆ ಪಾವತಿಸಲು ವಿಳಂಬ ಮಾಡಿದ ತಪ್ಪಿತಸ್ಥ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು” ಎಂದು ಪೀಠ ಸರ್ಕಾರಕ್ಕೆ ತಾಕೀತು ಮಾಡಿದೆ.

ಪ್ರಕರಣದ ಹಿನ್ನೆಲೆ: ರೈತರ ಜಮೀನಿಗೆ ಪೋಡಿ ಹಾಗೂ ಮ್ಯುಟೇಶನ್‌ ಸ್ಕೆಚ್‌ನಂತಹ ಕೆಲಸಗಳನ್ನು ತುರ್ತಾಗಿ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ತತ್ಕಾಲ್‌ ಸೇವೆ ಆರಂಭಿಸಿತ್ತು. ಇದು 2008ರಿಂದ 2012ರವರೆಗೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಮೇಲ್ಮನವಿದಾರ ಸರ್ವೇಯರ್‌ಗಳು ತಮ್ಮ ನಿತ್ಯದ ಕೆಲಸದ ಜೊತೆಗೆ ಹೆಚ್ಚುವರಿ ಕೆಲಸ ಮಾಡಿದ್ದರು. ಅವರಿಗೆ ಹೆಚ್ಚುವರಿ ಸಂಭಾವನೆ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಹೆಚ್ಚುವರಿ ಕೆಲಸಕ್ಕೆ ಸಂಭಾವನೆ ಪಾವತಿಸಿರಲಿಲ್ಲ. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ತತ್ಕಾಲ್‌ ಸೇವೆಯ ಯೋಜನೆಯಡಿ ಕೆಲಸ ಮಾಡಿಸಿಕೊಂಡು ಫಲಾನುಭವಿಗಳಿಂದ ಸಂಗ್ರಹಿಸಿರುವ ಮೊತ್ತವನ್ನು ನಮಗೆ ಪಾವತಿ ಮಾಡಿಲ್ಲ. ಖಜಾನೆಗೂ ಪಾವತಿಸದೆ, ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗಿದೆ. ನಮ್ಮಿಂದ ಹೆಚ್ಚುವರಿ ಕೆಲಸ ಮಾಡಿಸಿಕೊಂಡಿರುವ ಸರ್ಕಾರ, ಅದಕ್ಕೆ ಸಂಭಾವನೆ ಪಾತಿಸದೇ ಇರುವುದು ಅನ್ಯಾಯದ ನಡೆ ಎಂದು ವಾದಿಸಿದ್ದರು.