BMIC 
ಸುದ್ದಿಗಳು

ಬಿಎಂಐಸಿ: ಸುಂದರವೂ, ಭವಿಷ್ಯವರ್ತಿಯಾದ ಪರಿಕಲ್ಪನೆಯೊಂದನ್ನು ನಾಶಪಡಿಸಲಾಯಿತು ಎಂದು ಹೈಕೋರ್ಟ್‌ ಹೇಳಿದ್ದೇಕೆ?

“ಪೆರಿಫೆರಲ್‌ ರಸ್ತೆಗಳು ಮತ್ತು ಟೋಲ್‌ ಪ್ಲಾಜಾಗಳನ್ನು ನಿರ್ಮಿಸಿ ಅಪಾರ ಟೋಲ್‌ ಸಂಗ್ರಹಿಸಲಾಗುತ್ತಿದೆ. ಆದರೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ, ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಕಾಗದದಲ್ಲಿ ಮಾತ್ರ ಉಳಿದಿದೆ” ಎಂದಿರುವ ಹೈಕೋರ್ಟ್.

Bar & Bench

ಸಾರ್ವಜನಿಕರು ಮತ್ತು ಪರಿಸರಕ್ಕೆ ಪೂರಕವಾದಂತಹ ಸುಂದರವೂ, ಭವಿಷ್ಯವರ್ತಿಯೂ ಆದ ಬೆಂಗಳೂರು ಮೈಸೂರು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆಯನ್ನು ನಾಶ ಮಾಡಿದ್ದಕ್ಕಾಗಿ ಅದರ ವಿರೋಧಿಗಳು ಹಾಗೂ ಅಧಿಕಾರಿಗಳ ನಡೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಕಿಡಿಕಾರಿದೆ.

ಯೋಜನೆಗಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕೊಮ್ಮಘಟ್ಟ ಗ್ರಾಮದಲ್ಲಿ ವಶಪಡಿಸಿಕೊಂಡಿರುವ ಎಂಟು ಎಕರೆ ಭೂಮಿಗೆ ಪರ್ಯಾಯವಾಗಿ ನಿವೇಶನ ನೀಡುವಂತೆ ಕೋರಿ ಬೆಂಗಳೂರಿನ ಚಂದ್ರಿಕಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

Justices D K Singh & Venkatesh Naik T

ಕೆಐಎಡಿ ಕಾಯಿದೆ ಸೆಕ್ಷನ್‌ 29 (2) ರ ಅಡಿ ಒಪ್ಪಿಗೆ ಪತ್ರ ಮಾಡಿಸಿ, ಅದರ ಅಡಿ ಅರ್ಜಿದಾರರು ಪರಿಹಾರ ಪಡೆದಿರುವುದರಿಂದ ಅವರು ಯಾವುದೇ ರೀತಿಯ ಪರಿಹಾರ ಅಥವಾ ಬಡ್ಡಿಗೆ ಅರ್ಹರಲ್ಲ ಎಂದಿರುವ ನ್ಯಾಯಾಲಯವು ಹಿಂದಿನ ಯೋಜನೆಯನ್ನು ಕೈಬಿಟ್ಟು ಹೊಸದಾಗಿ ಯೋಜನೆಯನ್ನು ರೂಪಿಸುವ ಸಂಬಂಧ ಮರು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ

ತನ್ನ ಆದೇಶದಲ್ಲಿ ನ್ಯಾಯಾಲಯವು ಬಿಎಂಐಸಿ ಯೋಜನೆಯು ನಿಷ್ಫಲಗೊಂಡಿದ್ದರ ಬಗ್ಗೆ ಕ್ಷಕಿರಣ ಬೀರಿದೆ. ಇದಕ್ಕೆ ಕಾರಣರಾದ ಯೋಜನಾ ವಿರೋಧಿಗಳು, ಅಧಿಕಾರಿಗಳ ಬಗ್ಗೆ ಬೇಸರಿಸಿದೆ. "ಯೋಜನಾ ತಾಂತ್ರಿಕ ವರದಿ (ಪಿಟಿಆರ್‌) ಅಡಿಯಲ್ಲಿ ಕಲ್ಪಿಸಲಾದಂತೆ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಸುಂದರ ಮತ್ತು ಭವಿಷ್ಯವರ್ತಿಯಾದ ಪರಿಕಲ್ಪನೆಯೊಂದನ್ನು ಯೋಜನೆಯ ವಿರೋಧಿಗಳು ಮತ್ತು ಅಧಿಕಾರಿಗಳು ನಾಗರಿಕರು ಮತ್ತು ಪರಿಸರದ ಹಿತವನ್ನು ಬಲಿಕೊಟ್ಟು ಕೊಂದು ಹಾಕಿದ್ದಾರೆ. ಇದರಿಂದಾಗಿ, ಈ ಯೋಜನೆಯ ಪರಿಕಲ್ಪನೆ ಮತ್ತು ಒಪ್ಪಂದಗಳು ಹತಾಶೆಗೊಳ್ಳುವಂತಾಯಿತು. 25 ವರ್ಷಗಳಿಗೂ ಹೆಚ್ಚು ಕಾಲದಿಂದ ಕೇವಲ ಒಂದು ಕಿಲೋಮೀಟರ್ ಮಾತ್ರ ನಿರ್ಮಿಸಲಾದಾಗ ಯೋಜನೆಯನ್ನು ಜೀವಂತವಾಗಿಡುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ. ನಗರ, ಜನ, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ, ಯೋಜನೆಯನ್ನು ಪುನರ್ ಪರಿಶೀಲಿಸಬೇಕು ಮತ್ತು ಹಳೆಯದನ್ನು ಕೈಬಿಟ್ಟು ಹೊಸ ಯೋಜನೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ನ್ಯಾಯಾಲಯವು ಸರ್ಕಾರಕ್ಕೆ ಸಲಹೆ ನೀಡಿದೆ.

ಈ ನಿಟ್ಟಿನಲ್ಲಿ ಸರ್ಕಾರವು ಹಳೆಯ ಮೂಲ ಒಪ್ಪಂದವನ್ನು ತ್ವರಿತವಾಗಿ ರದ್ದುಗೊಳಿಸಿ, ಹೊಸದಾಗಿ ಯೋಜನೆ ರೂಪಿಸಲು ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಮಾಹಿತಿಯುಕ್ತ ನಿರ್ಧಾರವನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರು ಮತ್ತು ಮೈಸೂರು ನಡುವೆ ಎಕ್ಸ್‌ಪ್ರೆಸ್‌ ವೇ ನಿರ್ಮಿಸುವುದು ಬಿಎಂಐಸಿ ಯೋಜನೆಯಾಗಿದ್ದು, ಬೆಂಗಳೂರಿನ ಹೊರಗೆ ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕ ರಸ್ತೆಗಳನ್ನು ಸಂಧಿಸುವ ಪೆರಿಫಿರಲ್‌ ರಿಂಗ್‌ ರಸ್ತೆ ನಿರ್ಮಿಸುವುದಾಗಿತ್ತು. ಎಕ್ಸ್‌ಪ್ರೆಸ್‌ ವೇ ಮತ್ತು ಲಿಂಕ್‌ ರಸ್ತೆ ನಿರ್ಮಿಸುವುದರ ಜೊತೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವಂತೆ ಐದು ಟೌನ್‌ಶಿಪ್‌ಗಳನ್ನೂ ಯೋಜನೆಯ ಭಾಗವಾಗಿ ನಿರ್ಮಿಸಬೇಕಿತ್ತು.

“ಸದ್ಯ ಬೆಂಗಳೂರಿನ ಜನಸಂಖ್ಯೆಯು 1.4 ಕೋಟಿಯಷ್ಟಿದ್ದು, ಈ ಮಹಾತ್ವಕಾಂಕ್ಷಿ ಯೋಜನೆಯು ಯೋಜನಾ ತಾಂತ್ರಿಕ ವರದಿಯಿಂದ (ಪಿಟಿಆರ್‌) ದಿಕ್ಕು ತಪ್ಪಿದ್ದು, ಕಾಗದದಲ್ಲಿ ಮಾತ್ರ ಉಳಿದಿದೆ. ಮೂರು ದಶಕ ಕಳೆದರೂ ವ್ಯಾಪಕ ಭ್ರಷ್ಟಾಚಾರ, ಶಾಸಕಾಂಗ ಮತ್ತು ಕಾರ್ಯಾಂಗದ ಹಸ್ತಕ್ಷೇಪ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮತ್ತು ಬದ್ಧತೆಯ ಸಮಸ್ಯೆಯಿಂದ 111 ಕಿಲೋ ಮೀಟರ್‌ ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ರಸ್ತೆಯ ಪೈಕಿ 1 ಕಿಲೋ ಮೀಟರ್‌ ಮಾತ್ರ ನೈಸ್‌ ನಿರ್ಮಿಸಿದೆ.‌ 47 ಕಿಲೋ ಮೀಟರ್‌ ಪೆರಿಫಿರಲ್‌ ರಸ್ತೆ ನಿರ್ಮಿಸಿ, ಟೋಲ್‌ ಸಂಗ್ರಹಿಸುವ ಮೂಲಕ ಲಾಭ ಮಾಡಿಕೊಳ್ಳುತ್ತಿದೆ. ಆದರೆ, ಜನಸಂಖ್ಯೆ ಚದುರಿಸಿ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಹೊಸ ಸ್ಯಾಟಲೈಟ್‌ ಟೌನ್‌ಶಿಪ್‌ ರೂಪಿಸುವ ಸಾರ್ವಜನಿಕ ಹಿತಾಸಕ್ತಿಯು ಕಾಗದದ ಮೇಲೆ ಮಾತ್ರ ಉಳಿದಿದೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಯೋಜನೆಯ ದಿಕ್ಕನ್ನು ಬದಲಿಸುವಂತಿಲ್ಲ ಎಂದಿದೆ. ನಗರ, ಜನರು, ಪರಿಸರ ಮತ್ತು ಭವಿಷ್ಯದ ದೃಷ್ಟಿಯಿಂದ ಹಿಂದಿನ ಯೋಜನೆಯನ್ನು ಕೈಬಿಟ್ಟು ಹೊಸದಾಗಿ ಮರು ಪರಿಶೀಲನೆ ನಡೆಸುವಂತೆ ವಿಭಾಗೀಯ ಪೀಠವು ಸರ್ಕಾರಕ್ಕೆ ನಿರ್ದೇಶಿಸಿದೆ.

“ಪೆರಿಫೆರಲ್‌ ರಸ್ತೆಗಳು ಮತ್ತು ಟೋಲ್‌ ಪ್ಲಾಜಾಗಳನ್ನು ನಿರ್ಮಿಸಿ ಯೋಜನೆಯ ಪ್ರತಿಪಾದಕರು ಅಪಾರ ಪ್ರಮಾಣದಲ್ಲಿ ಟೋಲ್‌ ಸಂಗ್ರಹಿಸುತ್ತಿದ್ದಾರೆ. ಆದರೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಮತ್ತು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಕಾಗದದಲ್ಲಿ ಮಾತ್ರ ಉಳಿದಿದೆ. ಅಪಾರ ಪ್ರಮಾಣದ ಭೂ ಬ್ಯಾಂಕ್‌ ಮೇಲೆ ಯೋಜನೆಯ ಪ್ರತಿಪಾದಕರು ಕುಳಿತಿದ್ದು, ಅದನ್ನು ಸರಿಯಾಗಿ ಬಳಕೆ ಮಾಡದೇ ಅಥವಾ ಎಕ್ಸ್‌ಪ್ರೆಸ್‌ ನಿರ್ಮಿಸದಿರುವುದು, ಎಕ್ಸ್‌ಪ್ರೆಸ್‌ ವೇ ಅನ್ನು ಭವಿಷ್ಯದಲ್ಲಿ ನಿರ್ಮಿಸುವ ಯಾವ ಭರವಸೆಯೂ ಕಾಣುತ್ತಿಲ್ಲ. ಹೀಗಾಗಿ, ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಮರು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗುತ್ತಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Chandrika Vs State of Karnataka.pdf
Preview