ಹಲವು ನಗರಗಳಲ್ಲಿ ರೂಪಿಸಿರುವಂತೆ ಮೆಟ್ರೊ ರೈಲಿಗೆ ಸುರಂಗ ಮಾರ್ಗ ನಿರ್ಮಿಸಲು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ಯೋಚಿಸಬೇಕು. ಇದರಿಂದ ಮರಗಳನ್ನು ಕಡಿಯುವುದು ತಪ್ಪಲಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮೌಖಿಕವಾಗಿ ಸಲಹೆ ನೀಡಿತು. ಇದಕ್ಕೆ ನಿರ್ಮಾಣ ವೆಚ್ಚ ದುಬಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರತಿಕ್ರಿಯಿಸಿತು.
ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ವಿಭಾಗೀಯ ನಡೆಸಿತು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಮೂರ್ತಿ ಎಂ ಐ ಅರುಣ್ ಅವರು “ಹಲವು ನಗರಗಳಲ್ಲಿ ರೂಪಿಸಿರುವಂತೆ ಬಿಎಂಆರ್‌ಸಿಎಲ್ ಕನಿಷ್ಠ ಸುರಂಗ ಮೆಟ್ರೊ ಮಾರ್ಗದ ಬಗ್ಗೆ ಯೋಚಿಸಬೇಕು. ಹಲವು ಪ್ರದೇಶಗಳಲ್ಲಿ ಮರಗಳನ್ನು ಕಡಿಯಲಾಗಿದೆ. ಮರಗಳಿರುವ ಕಡೆಯಲ್ಲೇ ಮೆಟ್ರೊ ಹಳಿ ಹೋಗುತ್ತದೆ. ಜಯನಗರದ ಸೌಂತ್ ಎಂಡ್ ಸರ್ಕಲ್‌ನಿಂದ ಜೆ ಪಿ ನಗರ ರಿಂಗ್ ರಸ್ತೆಯಲ್ಲಿ ಹಾಗೆ ಆಗಿದೆ” ಎಂದರು.
ಇದಕ್ಕೆ ಬಿಎಂಆರ್‌ಸಿಎಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ಮೆಟ್ರೊಗಾಗಿ ಸುರಂಗ ನಿರ್ಮಿಸಿದರೆ ಅದಕ್ಕೆ ತಗುಲುವ ವೆಚ್ಚ ಸಾಮಾನ್ಯ ಮೆಟ್ರೊ ಹಳಿ ನಿರ್ಮಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚಿರುತ್ತದೆ. ಬಹುತೇಕ ಕಡೆ ರಸ್ತೆಯಲ್ಲಿಯೇ ಮೆಟ್ರೊ ಹಳಿ ರೂಪಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಹೊಂದಾಣಿಕೆ (ಅಲೇನ್‌ಮೆಂಟ್) ಬದಲಾಗುತ್ತದೆ. ಅದನ್ನು ಸರಿದೂಗಿಸಲು ಕೆಲವು ಮರಗಳನ್ನು ಕಡಿಯಬೇಕಾಗುತ್ತದೆ. ನಮ್ಮ ಉದ್ದೇಶವೂ ಮರಗಳನ್ನು ಕಡಿಯುವುದಲ್ಲ” ಎಂದು ಸಮಜಾಯಿಷಿ ನೀಡಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರದೀಪ್ ನಾಯಕ್ ಅವರು “ಬೆಂಗಳೂರಿನಲ್ಲಿ ಮರ ಕಡಿದು, 45 ಕಿ ಮೀ ಹೊರಗೆ ಗಿಡ ಬೆಳೆಸುತ್ತೇವೆ ಎಂದು ಬಿಎಂಆರ್‌ಸಿಎಲ್ ಹೇಳುತ್ತಿದೆ. 2022ರ ಸೆಪ್ಟೆಂಬರ್‌ನಲ್ಲಿ ಬಿಎಂಆರ್‌ಸಿಎಲ್‌ಗೆ 4,100 ಪರಿಹಾರತ್ಮಾಕ ಗಿಡಗಳನ್ನು ನೆಡಲು ನಿರ್ದೇಶಿಸಲಾಗಿತ್ತು. ಮೂರೂವರೆ ವರ್ಷ ಕಳೆದಿದ್ದರೂ ಒಂದೇ ಒಂದು ಗಿಡವನ್ನು ಬಿಎಂಆರ್‌ಸಿಎಲ್ ನೆಟ್ಟಿಲ್ಲ. ಪರಿಹಾರತ್ಮಾಕವಾಗಿ ಗಿಡಗಳನ್ನು ಬೆಳೆಸಬೇಕು ಮತ್ತು ತ್ರೈಮಾಸಿಕ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಇದರಲ್ಲಿ ನೆಟ್ಟಿರುವ ಗಿಡಗಳು ಉಳಿದಿದ್ದಾವೆಯೇ ಇಲ್ಲವೇ ಎಂಬುದನ್ನು ತಿಳಿಸಬೇಕು. ಆ ಹೊಣೆಗಾರಿಕೆಯನ್ನು ಬಿಎಂಆರ್‌ಸಿಎಲ್ ನಿಭಾಯಿಸಿಲ್ಲ. ಕನಿಷ್ಠ ಶೇ.10ರಷ್ಟು ಅರಣ್ಯೀಕರಣಕ್ಕೆ ಬಿಎಂಆರ್‌ಸಿಎಲ್ ಮುಂದಾಗಬೇಕು” ಎಂದರು.
ಧ್ಯಾನ್ ಚಿನ್ನಪ್ಪ ಅವರು “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ಹಳಿ ರೂಪಿಸಲು 75 ಮರಗಳನ್ನು ಕಡಿಯಲು ಅನುಮತಿಸಬೇಕು ಎಂದು ತಜ್ಞರ ಸಮಿತಿಗೆ ಬಿಎಂಆರ್‌ಸಿಎಲ್ ಕೋರಿತ್ತು. ಇದಕ್ಕೆ ತಜ್ಞರ ಸಮಿತಿಯು 15 ಮರಗಳನ್ನು ಹಾಗೆ ಉಳಿಸಿಕೊಳ್ಳಬೇಕು. ಐದು ಮರಗಳನ್ನು ಸ್ಥಳಾಂತರಿಸಬೇಕು ಮತ್ತು ಇನ್ನು 55 ಮರಗಳನ್ನು ಕಡಿಯಲು ಅನುಮತಿಸಿದೆ. ಸುಸ್ಥಿರ ಅಭಿವೃದ್ಧಿ ಅಗತ್ಯವಾಗಿದೆ. ಜನರು ವೇಗದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವುದು, ಕಾರ್ಬನ್ ಡೈ ಆಕ್ಸೈಡ್ ಕಡಿತ ಮಾಡುವುದರ ಬಗ್ಗೆಯೂ ಗಮನ ನೀಡಬೇಕಿದೆ. ಮೆಟ್ರೊದಿಂದ ಸಾಕಷ್ಟು ಕಾರುಗಳು ರಸ್ತೆಗೆ ಇಳಿಯುವುದಿಲ್ಲ” ಎಂದರು.
“ಮರ ಕಡಿಯಲು ಅನುಮತಿ ವಿಳಂಬ ಮಾಡುವುದರಿಂದ ಮೆಟ್ರೊ ನಿರ್ಮಾಣ ವೆಚ್ಚವು ಹೆಚ್ಚಾಗಲಿದೆ. ಬೇರೆ ಯಾವುದೇ ಪ್ರಾಜೆಕ್ಟ್ ಆಗಿದ್ದರೂ ಅಡ್ಡಿಯಿರಲಿಲ್ಲ. ಇದು ಸಾರ್ವಜನಿಕರ ಪ್ರಾಜೆಕ್ಟ್” ಎಂದರು.
ಇದನ್ನು ಆಲಿಸಿದ ಪೀಠವು ಅರ್ಜಿದಾರರ ಆಕ್ಷೇಪಣೆ ಪರಿಶೀಲಿಸಿ, ನಿರ್ಧರಿಸಲಾಗುವುದು ಎಂದು ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.
ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ವಿಸ್ತರಣೆ ಉದ್ದೇಶಕ್ಕಾಗಿ 538 ಮರಗಳನ್ನು ಮುಂದಿನ ಆದೇಶ ಮಾಡುವವರೆಗೆ ಕತ್ತರಿಸದಂತೆ ಬಿಬಿಎಂಪಿಗೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿ 538 ಮರಗಳನ್ನು ಕಡಿಯುವ ಸಂಬಂಧ ಬಿಬಿಎಂಪಿ ಅಧಿಕೃತವಾಗಿ ನಿವೇದನ ಪತ್ರ (ಮೆಮೊರಂಡಮ್) ಪ್ರಕಟಿಸಿದೆ. ಮರ ಕಡಿಯುವ ಸಂಬಂಧ ನ್ಯಾಯಾಲಯ ರಚಿಸಿರುವ ತಜ್ಞರ ಸಮಿತಿಯ ವರದಿಯನ್ನು ಹಾಕಲಾಗಿಲ್ಲ. ಕಡಿದ ಮರಗಳ ಸ್ಥಳದಲ್ಲಿ/ಬೇರೆಡೆ ಗಿಡಗಳನ್ನು ಬೆಳೆಸುವ ಸಂಬಂಧ ಯಾವುದೇ ವಿವರ ನೀಡಿಲ್ಲ. ಬಿಬಿಎಂಪಿಯಿಂದ 45 ಕಿ ಮೀ ಹೊರಗೆ ನೆಲಮಂಗಲ ತಾಲ್ಲೂಕಿನಲ್ಲಿ ಗಿಡ ಬೆಳೆಸುವುದಾಗಿ ಬಿಬಿಎಂಪಿ ಹೇಳುತ್ತಿದೆ. ಆಸ್ಪತ್ರೆ ವಿಸ್ತರಣೆಗಾಗಿ ಮರಗಳನ್ನು ಕಡಿಯಲಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಮರಗಳನ್ನು ಕಡಿಯುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ನ್ಯಾಯಾಲಯದ ನಿರ್ದೇಶನಗಳನ್ನು ಅನುಪಾಲಿಸುತ್ತಿಲ್ಲ ಎಂದು ಪ್ರದೀಪ್ ನಾಯಕ್ ಆಕ್ಷೇಪಿಸಿದರು.
ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ ವಕೀಲರಿಗೆ ನಿರ್ದೇಶಿಸಿದ ನ್ಯಾಯಾಲಯವು, ಮರ ಕಡಿಯಲು ನಿರ್ಬಂಧ ವಿಧಿಸಿ, ವಿಚಾರಣೆ ಮುಂದೂಡಿತು.