ಸುದ್ದಿಗಳು

ಮೆಟ್ರೋ ದರ ಹೆಚ್ಚಳ ವರದಿ ಮಾಹಿತಿ ಬಹಿರಂಗಪಡಿಸಿದ ಬಿಎಂಆರ್‌ಸಿಎಲ್‌: ತೇಜಸ್ವಿ ಅರ್ಜಿ ವಿಲೇವಾರಿ

“ಸೆಪ್ಟೆಂಬರ್‌ 11ರಂದು ದರ ನಿಗದಿ ಸಮಿತಿಯ ವರದಿಯನ್ನು ಬಿಎಂಆರ್‌ಸಿಎಲ್‌ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಹೀಗಾಗಿ, ಅರ್ಜಿಯನ್ನು ಪರಿಗಣಿಸುವ ಅವಶ್ಯಕತೆ ಇಲ್ಲ” ಎಂದ ತೇಜಸ್ವಿ ಸೂರ್ಯ ಪರ ವಕೀಲ ಅನಿರುದ್ಧ್‌.

Bar & Bench

ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಧಾರಣಿ ಅವರ ನೇತೃತ್ವದ ಮೆಟ್ರೋ ರೈಲು ದರ ನಿಗದಿ ಸಮಿತಿಯು ಸಲ್ಲಿಸಿರುವ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದನ್ನು ಪರಿಗಣಿಸಿ ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿ ಮಾಡಿದೆ.

ವರದಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿರುವುದರಿಂದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವಂತೆ ಕೋರಿ ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯು ಅಸ್ತಿತ್ವ ಕಳೆದುಕೊಂಡಿದೆ ಎಂದು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್‌ ಅವರು ಅದನ್ನು ವಿಲೇವಾರಿ ಮಾಡಿದರು.

ತೇಜಸ್ವಿ ಪರವಾಗಿ ಹಾಜರಾಗಿದ್ದ ವಕೀಲ ಅನಿರುದ್ಧ್‌ ಕುಲಕರ್ಣಿ ಅವರು “ಸೆಪ್ಟೆಂಬರ್‌ 11ರಂದು ದರ ನಿಗದಿ ಸಮಿತಿಯ ವರದಿಯನ್ನು ಬಿಎಂಆರ್‌ಸಿಎಲ್‌ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಹೀಗಾಗಿ, ಅರ್ಜಿಯನ್ನು ಪರಿಗಣಿಸುವ ಅವಶ್ಯಕತೆ ಇಲ್ಲ” ಎಂದರು. ಇದನ್ನು ಪರಿಗಣಿಸಿ, ನ್ಯಾಯಾಲಯವು ಅರ್ಜಿಗೆ ಅಂತ್ಯ ಹಾಡಿತು.

ಈ ಮಧ್ಯೆ, ಬೆಂಗಳೂರಿನ ನಿವಾಸಿಯಾಗಿರುವ ಎಸ್‌ ಆನಂದ್‌ ಅವರು ರೈಲು ಪ್ರಯಾಣ ದರ ಹೆಚ್ಚಿಸಿರುವುದನ್ನು ಹಿಂಪಡೆಯಬೇಕು ಮತ್ತು ಇದುವರೆಗೆ ಹೆಚ್ಚುವರಿ ದರ ಭಾಗವಾಗಿ 19.02.2025ರಿಂದ ಪಡೆದಿರುವ ಹಣವನ್ನು ಮರಳಿಸಲು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿತು.

ಮೆಟ್ರೊ ರೈಲು (ಕಾರ್ಯನಿರ್ವಹಣೆ ಮತ್ತು ನಿರ್ವಹಣೆ) ಕಾಯಿದೆ ಸೆಕ್ಷನ್‌ 34ರ ಅನ್ವಯ 2024ರ ಸೆಪ್ಟೆಂಬರ್‌ 7ರಂದು ನಿವೃತ್ತ ನ್ಯಾ. ಧಾರಣಿ ಅವರ ನೇತೃತ್ವದಲ್ಲಿ ಪರಿಷ್ಕೃತ ದರ ಪಟ್ಟಿ ಶಿಫಾರಸ್ಸು ಮಾಡುವಂತೆ ದರ ನಿಗದಿ ಸಮಿತಿಯನ್ನು ಬಿಎಂಆರ್‌ಸಿಎಲ್‌ ರಚಿಸಿತ್ತು. ಇದರ ಅನ್ವಯ ಸಮಿತಿಯು ದೇಶದ ವಿವಿಧೆಡೆ ಮತ್ತು ಸಿಂಗಪೋರ್‌ ಹಾಗೂ ಹಾಂಗ್‌ಕಾಂಗ್ ಸೇರಿ ಜಾಗತಿಕ ಮೆಟ್ರೋ ರೈಲು ಪ್ರಯಾಣ ದರಗಳನ್ನು ಅಧ್ಯಯನ ಮಾಡಿ 2024ರ ಡಿಸೆಂಬರ್‌ 16ರಂದು ವರದಿ ಸಲ್ಲಿಸಿತ್ತು. 2025ರ ಫೆಬ್ರವರಿ 8ರಂದು ಇದನ್ನು ಬಿಎಂಆರ್‌ಸಿಎಲ್‌ ಮಾಧ್ಯಮ ಹೇಳಿಕೆಯ ಮೂಲಕ ಜನರಿಗೆ ತಿಳಿಸಿತ್ತು.

ಇದರ ಭಾಗವಾಗಿ 2025ರ ಫೆಬ್ರವರಿ 9ರಂದು ಕೆಲವು ಕಡೆ ಶೇ.100ರಷ್ಟು ಅಂದರೆ ಮೆಟ್ರೋ ರೈಲು ಟಿಕೆಟ್‌ ದರವನ್ನು 60ರಿಂದ 90 ರೂಪಾಯಿಗೆ ಹೆಚ್ಚಿಸಲಾಗಿತ್ತು. ಆ ಮೂಲಕ ಇಡೀ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಅಪಖ್ಯಾತಿಗೆ ಗುರಿಯಾಗಿತ್ತು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2025ರ ಫೆಬ್ರವರಿ 14ರಂದು ಬಿಎಂಆರ್‌ಸಿಎಲ್‌ ಶೇ.71ಕ್ಕೆ ಗರಿಷ್ಠ ಟಿಕೆಟ್‌ ದರ ಮಿತಿಗೊಳಿಸಿತ್ತು.

ಹೀಗಾಗಿ, ದರ ನಿಗದಿ ಸಮಿತಿ ವರದಿ ಬಹಿರಂಗಗೊಳಿಸುವಂತೆ ಬಿಎಂಆರ್‌ಸಿಎಲ್‌ಗೆ ಹಲವು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿ ತೇಜಸ್ವಿ ಸೂರ್ಯ ಹೈಕೋರ್ಟ್‌ ಕದತಟ್ಟಿದ್ದರು.