High Court of Karnataka 
ಸುದ್ದಿಗಳು

ದೇಹದ ಅವಹೇಳನ, ಮೌಖಿಕ ನಿಂದನೆ ಮಾತ್ರ ಮಹಿಳೆಯ ಶೀಲಕ್ಕೆ ಧಕ್ಕೆ ತಂದ ಅಪರಾಧ ಸಾಬೀತುಪಡಿಸಲು ಸಾಲದು: ಹೈಕೋರ್ಟ್

“ನನ್ನ ದೇಹದ ಆಕಾರ, ತೂಕದ ಬಗ್ಗೆ ಲೇವಡಿ ಮಾಡಲಾಗಿದೆ ಮತ್ತು ಅಶ್ಲೀಲ ಭಾಷೆ ಬಳಸಿ ಜನಾಂಗೀಯ ನಿಂದನೆ ಮಾಡಲಾಗಿದೆ. ಇದರಿಂದ ನನಗೆ ಮತ್ತು ನನ್ನ ಸ್ನೇಹಿತರಿಗೆ ಮಾನಸಿಕ ಆಘಾತ ಹಾಗೂ ತೀವ್ರ ಸಂಕಟವಾಗಿದೆ” ಎಂದು ಯುವತಿ ದೂರಿದ್ದರು.

Bar & Bench

"ಮಹಿಳೆಯ ದೇಹದ ಕುರಿತು ಲೇವಡಿ ಮಾಡಲಾಗಿದೆ (ಬಾಡಿ ಶೇಮಿಂಗ್) ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂಬಷ್ಟೇ ಆರೋಪಗಳು ಐಪಿಸಿ ಸೆಕ್ಷನ್ 509ರ ಅಡಿ ಮಹಿಳೆಯ ಮರ್ಯಾದೆಗೆ ಭಂಗ ತರುವ ಅಪರಾಧ ಎನಿಸುವುದಿಲ್ಲ" ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ 25 ಮತ್ತು 27 ವರ್ಷದ ಇಬ್ಬರು ಆರೋಪಿ ತರುಣಿಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice S R Krishna Kumar

“ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂರನೇ ಆರೋಪಿ ತರುಣನ ವಿರುದ್ಧದ ನ್ಯಾಯಿಕ ಕ್ರಮವನ್ನು ಹೈಕೋರ್ಟ್ 2024ರ ಜೂನ್‌ನಲ್ಲೇ ರದ್ದುಗೊಳಿಸಿದೆ. ಅಂತೆಯೇ, ಅರ್ಜಿದಾರ ತರುಣಿಯರ ವಿರುದ್ಧದ ಆರೋಪಗಳೂ ಏಕರೂಪವಾಗಿವೆ. ಒಂದೇ ರೀತಿಯ ಸನ್ನಿವೇಶಗಳಲ್ಲಿ ಒಂದೇ ರೀತಿಯ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಅನ್ವಯಿಸಬಹುದಾದ ಸಮಾನತೆಯ ತತ್ವದಡಿ ಈ ಪ್ರಕರಣವನ್ನೂ ರದ್ದುಪಡಿಸಲಾಗುತ್ತಿದೆ” ಎಂದು ಪೀಠ ಹೇಳಿದೆ.

“ಅಷ್ಟಕ್ಕೂ, ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ಅಪರಾಧವನ್ನು ಸಾಬೀತುಪಡಿಸಲು ಅಗತ್ಯವಿರುವ ಅಂಶಗಳು ಲಭ್ಯವಿರುವ ಸಾಕ್ಷ್ಯಾಧಾರಗಳಲ್ಲಿ ಕಂಡು ಬಂದಿಲ್ಲ” ಎಂದು ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: 2026ರ ಆಗಸ್ಟ್ 9ರಂದು ರಾತ್ರಿ ಇಬ್ಬರು ತರುಣಿಯರು ಮತ್ತು ಒಬ್ಬ ತರುಣ ನನ್ನನ್ನು ಹಾಗೂ ನನ್ನ ಸ್ನೇಹಿತರನ್ನು ನಿಂದಿಸಿದ್ದಾರೆ‌. ನನ್ನ ದೇಹದ ಆಕಾರ, ತೂಕದ ಬಗ್ಗೆ ಲೇವಡಿ ಮಾಡಲಾಗಿದೆ ಮತ್ತು ಅಶ್ಲೀಲ ಭಾಷೆ ಬಳಸಿ ಜನಾಂಗೀಯ ನಿಂದನೆ ಮಾಡಲಾಗಿದೆ. ಇದರಿಂದ ನನಗೆ ಮತ್ತು ನನ್ನ ಸ್ನೇಹಿತರಿಗೆ ಮಾನಸಿಕ ಆಘಾತ ಹಾಗೂ ತೀವ್ರ ಸಂಕಟ ಉಂಟಾಗಿದೆ ಎಂದು ಆರೋಪಿಸಿ 26 ವರ್ಷದ ತರುಣಿಯೊಬ್ಬರು ಬೆಂಗಳೂರಿನ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.

ತನಿಖೆ ನಡೆಸಿ ಐಪಿಸಿ ಸೆಕ್ಷನ್ 509ರ (ಒಬ್ಬ ಮಹಿಳೆಯ ಮಾನಕ್ಕೆ ಕುಂದು ಉಂಟುಮಾಡುವ  ಉದ್ದೇಶದ ಶಬ್ದ, ಸಂಜ್ಞೆ ಅಥವಾ ಕೃತ್ಯ ಎಸಗುವ ಅಪರಾಧ-ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು ಜುಲ್ಮಾನೆ) ಅಡಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.