ಪುರಾವೆಗಾಗಿ ಪಾಟ್ನಾ ನ್ಯಾಯಾಲಯವೊಂದಕ್ಕೆ ತಂದಿದ್ದ ಬಾಂಬ್ ಸ್ಫೋಟಗೊಂಡ ಪರಿಣಾಮ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಪುರಾವೆಗಾಗಿ ಸಬ್ ಇನ್ಸ್ಪೆಕ್ಟರ್ ಒಬ್ಬರು ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ಪೆಟ್ಟಿಗೆಯಲ್ಲಿರಿಸಿ ತಂದು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿಯ ಮೇಜಿನ ಮೇಲಿಟ್ಟಿದ್ದರು. ಆ ವೇಳೆ ಬಾಂಬ್ ಸ್ಫೋಟಿಸಿದ್ದು ಅದನ್ನು ತಂದಿರಿಸಿದ್ದ ಪೊಲೀಸ್ ಅಧಿಕಾರಿಯ ಕೈಗೆ ಗಾಯವಾಗಿದ್ದು ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಈ ವೇಳೆ, ಅದೇ ಕೋಣೆಯಲ್ಲಿ ಮತ್ತೊಂದು ಪೆಟ್ಟಿಗೆಯಲ್ಲಿರಿಸಲಾಗಿದ್ದ ಬಾಂಬ್ ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಅದನ್ನು ನಿಷ್ಕ್ರಿಯಗೊಳಿಸಲು ತಮಗೆ ಸಾಧ್ಯವಿಲ್ಲ, ಅದಕ್ಕೆ ಭಯೋತ್ಪಾದನಾ ನಿಗ್ರಹ ದಳವೇ ಬರಬೇಕು ಎಂದು ಸ್ಫೋಟಕ ನಿಗ್ರಹ ದಳ ತಿಳಿಸಿದ್ದರಿಂದ ಎರಡು ಗಂಟೆಗಳ ಕಾಲ ಆ ಬಾಂಬ್ ಕೋಣೆಯಲ್ಲೇ ಉಳಿಯುವಂತಾಗಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಬಾಂಬ್‌ಗಳನ್ನು ಸೂಕ್ತ ರೀತಿಯಲ್ಲಿ ನಿಷ್ಕ್ರಿಯಗೊಳಿಸಲಾಗಿದೆಯೇ, ಇಲ್ಲವೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.