ಸುದ್ದಿಗಳು

ವಿಮಾನ ನಿಲ್ದಾಣ, ಲುಲು ಮಾಲ್‌ಗೆ ಬಾಂಬ್‌ ಬೆದರಿಕೆ: ದೆಹಲಿ ವ್ಯಕ್ತಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಇ-ಮೇಲ್‌ ಹ್ಯಾಕ್‌ ಮಾಡಲಾಗಿತ್ತು ಎಂಬ ಆರೋಪಿಯ ವಾದ ತಳ್ಳಿಹಾಕಿದ ಪೀಠವು ಬಾಂಬ್‌ ಬೆದರಿಕೆಯೊಡ್ಡಿ ಇ-ಮೇಲ್‌ ಕಳುಹಿಸಿ; ಜನರನ್ನು ಆತಂಕಕ್ಕೆ ತಳ್ಳುವ ಹಾಗೂ ವ್ಯವಸ್ಥೆಯೊಂದಿಗೆ ಆಟವಾಡುವ ನಡೆಯನ್ನು ಒಪ್ಪಲಾಗದು ಎಂದು ಕಟುವಾಗಿ ನುಡಿದಿದೆ.

Bar & Bench

ಲುಲು ಮಾಲ್‌, ಮಂತ್ರಿ ಸ್ಕ್ವೇರ್‌ ಸೇರಿ ಬೆಂಗಳೂರಿನ ಹಲವು ಮಾಲ್‌ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಉಗ್ರ ಸಂಘಟನೆ ಜೈಶ್‌-ಏ-ಮೊಹಮ್ಮದ್‌ ಹೆಸರಿನಲ್ಲಿ ಬಾಂಬ್‌ ಬೆದರಿಕೆ ಹಾಕಿದ ಆರೋಪದ ಮೇಲೆ ದಕ್ಷಿಣ ದೆಹಲಿ ನಿವಾಸಿಯೊಬ್ಬನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್‌, ಆತನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಈಚೆಗೆ ನಿರಾಕರಿಸಿದೆ.

ಇ-ಮೇಲ್‌ ಹ್ಯಾಕ್‌ ಮಾಡಲಾಗಿತ್ತು ಎಂಬ ಆರೋಪಿಯ ವಾದ ತಳ್ಳಿಹಾಕಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಬಾಂಬ್‌ ಬೆದರಿಕೆಯೊಡ್ಡಿ ಇ-ಮೇಲ್‌ ಕಳುಹಿಸಿ; ಜನರನ್ನು ಆತಂಕಕ್ಕೆ ತಳ್ಳುವ ಹಾಗೂ ವ್ಯವಸ್ಥೆಯೊಂದಿಗೆ ಆಟವಾಡುವ ನಡೆಯನ್ನು ಒಪ್ಪಲಾಗದು ಎಂದು ಕಟುವಾಗಿ ನುಡಿದಿದೆ.

Justice M Nagaprasanna

ಕಂಪ್ಯೂಟರ್ ಅಥವಾ ಇಂಟರ್ನೆಟ್ ಸಂಪನ್ಮೂಲ ದುರುಪಯೋಗಪಡಿಸಿಕೊಂಡು ಜನರಲ್ಲಿ ಭಯ ಉಂಟುಮಾಡಿದ ಅಪರಾಧ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಎಫ್‌) ಅಡಿಯಲ್ಲಿ ತನ್ನ ವಿರುದ್ಧ ಬೆಂಗಳೂರು ಸೈಬರ್‌ ಕ್ರೈಂ ಠಾಣಾ ಪೊಲೀಸರು ದಾಖಲಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ದಕ್ಷಿಣ ದೆಹಲಿ ನಿವಾಸಿ ಅಭಯ್ ಶೀ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “2025ರ ನವೆಂಬರ್‌ 30ರಂದು ಇ-ಮೇಲ್‌ನಿಂದ ಹುಸಿ ಬಾಂಬ್‌ ಬೆದರಿಕೆ ಹಾಕಿರುವುದಕ್ಕೆ ಇಡೀ ಪ್ರಕರಣ ಸಂಬಂಧಿಸಿದೆ. ಅರ್ಜಿದಾರರ ಇ-ಮೇಲ್‌ಗೆ ಸಂಪರ್ಕ ಸಮಸ್ಯೆ ಇತ್ತು. ಆ ಬಗ್ಗೆ ಮೊಬೈಲ್‌ ನೆಟ್‌ವರ್ಕ್‌ ಕಂಪನಿಗೆ ದೂರು ನೀಡಿದ್ದು, ಅದನ್ನು ಪರಿಗಣಿಸಿ ಬಗೆಹರಿಸಲಾಗಿದೆ” ಎಂದು ವಾದಿಸಿದರು.

ಆಗ ಪೀಠವು “ಅರ್ಜಿದಾರರ ಇ-ಮೇಲ್‌ ವಿಳಾಸದಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಅಲ್ಲವೇ?” ಎಂದು ಕೇಳಿತು.

ಅರ್ಜಿದಾರರ ಪರ ವಕೀಲರು “ಅರ್ಜಿದಾರರ ಇ-ಮೇಲ್‌ ಖಾತೆ ಹ್ಯಾಕ್‌ ಆಗಿತ್ತು” ಎಂದು ಉತ್ತರಿಸಿದರು.

ಅದಕ್ಕೆ ಪೀಠವು “ಅಚ್ಚರಿಯಿಂದ ಓಹೋ.. ಹೌದಾ! ಹಾಗಾದರೆ ಆ ವಿಚಾರ ಸಾಕ್ಷ್ಯಧಾರಕ್ಕೆ ಸಂಬಂಧಿಸಿದೆ ಬಿಡಿ” ಎಂದು ಸೂಚಿಸಿತು.

ಅರ್ಜಿದಾರರ ಪರ ವಕೀಲರು ಮುಂದುವರಿದು “ಇ-ಮೇಲ್‌ ಅರ್ಜಿದಾರರಿಗೆ ಸಂಬಂಧಿಸಿದ್ದಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಡೆಸಿಲ್ಲ. ದೆಹಲಿ ಪೊಲೀಸರು ಸಹ ಇದೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ” ಎಂದು ಸಮಜಾಯಿಷಿ ನೀಡಿದರು.

ಇದರಿಂದ ಆಕ್ರೋಶಗೊಂಡ ಪೀಠವು “ಅದರಿಂದ ಸಮಸ್ಯೆ ಏನೂ ಇಲ್ಲ. ಕೆಂಪೇಗೌಡ ವಿಮಾನ ನಿಲ್ದಾಣ, ಲುಲು ಮಾಲ್‌, ಮಂತ್ರಿ ಸ್ಕ್ವೇರ್‌, ಓರಿಯಾನ್‌ ಮಾಲ್‌ ಅನ್ನು ಟಾರ್ಗೆಟ್ ಮಾಡಲಾಗಿದೆ. ರಾತ್ರಿ 7 ಗಂಟೆ ನಂತರ ಬಾಂಬ್‌ ಸ್ಫೋಟಿಸಲಾಗುವುದು ಎಂದು ಬೆದರಿಕೆ ಸಂದೇಶವು 2025ರ ನವೆಂಬರ್‌ 30ರಂದು ಬೆಳಗ್ಗೆ 11.53ಕ್ಕೆ ಅರ್ಜಿದಾರರ ಇ-ಮೇಲ್‌ ಖಾತೆಯಿಂದಲೇ ಬಂದಿದೆ. ಈ ಸಂಗತಿ ಬಹಿರಂಗವಾದ ನಂತರ ಇ-ಮೇಲ್‌ ಹ್ಯಾಕ್‌ ಆಗಿದೆ ಎಂದು ಸಬೂಬು ಹೇಳಿದರೆ; ನ್ಯಾಯಾಲಯ ಒಪ್ಪುವುದಿಲ್ಲ. ಹ್ಯಾಕ್‌ ವಿಚಾರ ಸಾಕ್ಷ್ಯಧಾರಗಳಿಂದ ದೃಢಪಡಲಿ” ಎಂದು ತೀಕ್ಷ್ಣವಾಗಿ ಹೇಳಿತು.

“ಇ-ಮೇಲ್‌ ಹ್ಯಾಕ್‌ ಆದ ಬಗ್ಗೆ ದೂರು ನೀಡಲಾಗಿದೆಯೇ?” ಎಂದು ಪ್ರಶ್ನಿಸಿದ ಪೀಠವು ಬಾಂಬ್‌ ಬೆದರಿಕೆ ಹಾಕಿ ಅರ್ಜಿದಾರರು ಇ-ಮೇಲ್‌ ಕಳುಹಿಸಿದ್ದಾರೆ. ಈಗ ನ್ಯಾಯಾಲಯಕ್ಕೆ ಬಂದು ಹ್ಯಾಕ್‌ ಕಥೆ ಹೇಳುತ್ತಿದ್ದಾರೆ. ನಿಜವಾಗಿಯೂ ಬಾಂಬ್‌ ಹಾಕಲಾಯಿತೋ ಅಥವಾ ಇಲ್ಲವೋ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಜನರಿಗೆ ಆತಂಕ ಮೂಡಿಸಲಾಗಿದೆ. ಇಂತಹ ನಡೆ ಒಪ್ಪಲಾಗದು. ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆಗ ಮಧ್ಯಪ್ರವೇಶಿಸಿ; ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗದು ಎಂದು ನುಡಿದು ಅರ್ಜಿ ವಜಾಗೊಳಿಸಿತು.