Justice DY Chandrachud 
ಸುದ್ದಿಗಳು

ನ್ಯಾ. ಚಂದ್ರಚೂಡ್ ವಿರುದ್ಧ ದುರುದ್ದೇಶಪೂರ್ವಕ ಆರೋಪ: ಪಠಾಣ್ ವಿರುದ್ಧ ಕ್ರಮಕ್ಕೆ ಬಾಂಬೆ ವಕೀಲರ ಸಂಘ ಆಗ್ರಹ

ನ್ಯಾಯಾಂಗ ನಿಂದನೆಗಾಗಿ 2019ರಲ್ಲಿ ಪಠಾಣ್ ಸುಪ್ರೀಂ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗಿದ್ದರು ಎಂದ ನಿರ್ಣಯದಲ್ಲಿ ಮಾಹಿತಿ.

Bar & Bench

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ವಿರುದ್ಧ ಆರೋಪ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರಿಗೆ ಪತ್ರ ಬರೆದಿರುವ ರಶೀದ್ ಖಾನ್ ಪಠಾಣ್ ಎಂಬ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿ ಬಾಂಬೆ ಬಾರ್ ಅಸೋಸಿಯೇಷನ್ ​​(ಬಿಬಿಎ) ಸೋಮವಾರ ನಿರ್ಣಯ ಅಂಗೀಕರಿಸಿದೆ.

ದೂರು ಸಿದ್ಧಪಡಿಸಿದ್ದಕ್ಕೆ ಸಂಬಂಧಿಸಿದಂತೆ ಪಠಾಣ್‌ ಮತ್ತು ಆತನೊಂದಿಗೆ ಸಂಪರ್ಕ ಹೊಂದಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ವಕೀಲ ನಿತಿನ್ ಠಕ್ಕರ್ ನೇತೃತ್ವದ ಸಂಘದ ಸ್ಥಾಯಿ ಸಮಿತಿ ಮನವಿ ಮಾಡಿದೆ.

ನಿರ್ಣಯದ ಪ್ರಮುಖಾಂಶಗಳು

  • ನ್ಯಾ. ಚಂದ್ರಚೂಡ್ ಅವರ ವಿರುದ್ಧ ಪಠಾಣ್ ನೀಡಿರುವ ದೂರು ಮೇಲ್ನೋಟಕ್ಕೆ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ ಆರೋಪ.

  • ನ್ಯಾಯಾಂಗ ನಿಂದನೆಗಾಗಿ 2019ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಶಿಕ್ಷೆಗೊಳಗಾದ ವ್ಯಕ್ತಿಯೇ ಈ ಪಠಾಣ್.

  • ಆದರೂ, ಪಠಾಣ್ ನ್ಯಾಯಾಂಗವನ್ನು ಬೆದರಿಸುವ ಮತ್ತು ನ್ಯಾಯಿಕ ಆಡಳಿತದಲ್ಲಿ ಹಸ್ತಕ್ಷೇಪ ಉಂಟುಮಾಡುವ ಸಲುವಾಗಿ ನ್ಯಾಯಾಧೀಶರ ವಿರುದ್ಧ ಆರೋಪ ಮಾಡುವ ಅಭ್ಯಾಸವನ್ನು ಮುಂದುವರಿಸಿದ್ದಾರೆ.

  • ಸುಪ್ರೀಂ ಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್‌ ಹೆಸರನ್ನು ಶಿಫಾರಸು ಮಾಡುವ ಮುನ್ನ ಪಠಾಣ್‌ ನೀಡಿದ ಪ್ರಸ್ತುತ ದೂರು ಕೂಡ ಇದೇ ರೀತಿಯ ಕೃತ್ಯವಲ್ಲದೆ ಬೇರೇನೂ ಅಲ್ಲ. ದೂರಿನ ದುರುದ್ದೇಶ ದೂರು ನೀಡಿದ ಸಮಯದಿಂದಾಗಿಯೇ ಬಹಿರಂಗಗೊಂಡಿದೆ.

  • ಪ್ರಕರಣವೊಂದರಲ್ಲಿ ತಮ್ಮ ಪುತ್ರ, ನ್ಯಾಯವಾದಿ ಅಭಿನವ್‌ ಚಂದ್ರಚೂಡ್‌ ಬಾಂಬೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಚಂದ್ರಚೂಡ್‌ ಆದೇಶ ನೀಡಿದ್ದಾರೆ ಎಂಬ ಆರೋಪವಿದ್ದರೂ ಅಭಿನವ್‌ ಅವರು ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಸೂಚಿಸಿದ ಪ್ರಕರಣಗಳಲ್ಲಿ ಪ್ರಾಕ್ಟೀಸ್‌ ಮಾಡಿದ್ದು ಅವರು ನೇರವಾಗಿ ಕಕ್ಷಿದಾರರೊಂದಿಗೆ ಸಂವಹನ ನಡೆಸಿಲ್ಲ. ಅಲ್ಲದೆ ಸುಪ್ರೀಂ ಕೋರ್ಟ್‌ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಆದೇಶ ನೀಡಿಲ್ಲ. ಪ್ರಕರಣವನ್ನು ಬಾಂಬೆ ಹೈಕೋರ್ಟ್‌ ಆಲಿಸುವಂತೆ ಸೂಚಿಸಿದೆ ಅಷ್ಟೇ.

  • ಕೋವಿಡ್‌ ಲಸಿಕೆ ತೆಗೆದುಕೊಳ್ಳದ ಜನರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿ ನ್ಯಾ. ಚಂದ್ರೂಚೂಡ್‌ ಕೆಲ ಆದೇಶಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು ನ್ಯಾಯಮೂರ್ತಿಯಾಗಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಹೊರಡಿಸಲಾದ ನ್ಯಾಯಾಂಗ ಆದೇಶಗಳ ಬಗ್ಗೆ ದೂರಿದರೆ ಅದು ನ್ಯಾಯಾಂಗ ವ್ಯವಸ್ಥೆ ಮೇಲೆ ನಡೆಸುವ ದಾಳಿಯಲ್ಲದೆ ಬೇರೇನೂ ಅಲ್ಲ.

  • ನ್ಯಾಯಾಂಗವನ್ನು ದುರ್ಬಲಗೊಳಿಸುವ ಕೆಟ್ಟ ಚಾಳಿಯನ್ನು ಖಂಡಿಸುತ್ತಿದ್ದೇವೆ. ನ್ಯಾ. ಚಂದ್ರಚೂಡ್‌ ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಇದೆ.

  • ದೂರನ್ನು ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಸಿಜೆಐ ಲಲಿತ್ ಮತ್ತು ಕೇಂದ್ರ ಜಾಗೃತ ಆಯೋಗ ಪರಿಗಣಿಸಬಾರದು ಮತ್ತು ಪಠಾಣ್‌ ವಿರುದ್ಧ ಕ್ರಮ ಕೈಗೊಳ್ಳಬೇಕು.