Onions
Onions Photo Courtesy: IANS
ಸುದ್ದಿಗಳು

ಈರುಳ್ಳಿ ರಫ್ತು ನಿಷೇಧ: ಬಾಕಿ ಸರಕಿನ ರಫ್ತಿಗೆ ಅನುಮತಿಸುವಂತೆ ಕಸ್ಟಮ್ಸ್ ಗೆ ಸೂಚಿಸಿದ ಬಾಂಬೆ ಹೈಕೋರ್ಟ್

Bar & Bench

ಈರುಳ್ಳಿ ರಫ್ತಿನ ಮೇಲೆ ಸೆಪ್ಟೆಂಬರ್ 14ರಂದು ಕಸ್ಟಮ್ಸ್ ಅಧಿಕಾರಿಗಳು ನಿಷೇಧ ಆದೇಶ ಹೊರಡಿಸುವುದಕ್ಕೂ ಮುನ್ನ ಬಾಕಿ ಇದ್ದ ಸರಕನ್ನು ರಫ್ತು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬಾಂಬೆ ಹೈಕೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಗೆ ಸೂಚಿಸಿದೆ.

ತೋಟಗಾರಿಕಾ ಬೆಳೆಗಳ ರಫ್ತುದಾರರ ಸಂಸ್ಥೆ, ಫೇರ್ ಆಗ್ರೊ ಪ್ರವರ್ತಕರು ಮತ್ತು ಇತರೆ ರಫ್ತುದಾರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅಭಯ್ ಅಹುಜಾ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ರಫ್ತಿಗೆ ಸಿದ್ಧವಾಗಿದ್ದ ಈರುಳ್ಳಿ ಕಳುಹಿಸಿಕೊಡಲು ಕಸ್ಟಮ್ಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಅರ್ಜಿದಾರರು ಇದೇ ಮನವಿಯನ್ನು ನ್ಯಾಯಾಲಯದ ಮುಂದಕ್ಕೆ ಒಯ್ದಿದ್ದರು.

“ರಫ್ತಿಗೆ ಸಿದ್ಧವಾಗಿರುವ ಸರಕುಗಳನ್ನು ಕಳುಹಿಸಿಕೊಡಲು ತೀರ್ಮಾನಿಸಿರುವ ಪ್ರತಿವಾದಿಗಳ ನಿರ್ಧಾರಕ್ಕೆ ಮೆಚ್ಚುಗೆಗೆ ವ್ಯಕ್ತಪಡಿಸುತ್ತಲೇ ಇದೇ ನಿರ್ಣಯವನ್ನು ಈರುಳ್ಳಿ ಮೇಲೆ ನಿಷೇಧ ಹೇರುವುದಕ್ಕೂ ಮುನ್ನ ಕಸ್ಟಮ್ಸ್ ಅಧಿಕಾರಿಗಳ ಬಳಿ ಇರುವ ಅರ್ಜಿದಾರರ ಸರಕನ್ನು ರಫ್ತು ಮಾಡಲು ಅವಕಾಶ ಮಾಡಿಕೊಡುವುದು ನ್ಯಾಯಯೋಚಿತ.”
ಬಾಂಬೆ ಹೈಕೋರ್ಟ್

ಸರಕು ಬೇಗ ಕೊಳೆತು ಹೋಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ತುರ್ತಾಗಿ ನಿರ್ಧಾರ ಕೈಗೊಳ್ಳುವಂತೆ ಕಸ್ಟಮ್ಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಈರುಳ್ಳಿ ರಫ್ತಿಗೆ ನಿಷೇಧ ಹೇರಿರುವ ಅಧಿಸೂಚನೆಯ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.

ಮುಂದಿನ ವಿಚಾರಣೆಗೂ ಮುನ್ನ ಕಸ್ಟಮ್ಸ್ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆಯುವಂತೆ ಹಿರಿಯ ವಕೀಲ ಪ್ರದೀಪ್ ಜೇಟ್ಲಿ ಅವರಿಗೆ ನ್ಯಾಯಾಲಯವು ಸೂಚಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರ ಜೊತೆ ಕಸ್ಟಮ್ಸ್ ಅಧಿಕಾರಿಗಳ ಪರವಾಗಿ ಜೇಟ್ಲಿ ವಾದಿಸಿದರು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಡೇರಿಯಸ್ ಶ್ರಾಫ್ ಅವರು ರಫ್ತು ಬಿಲ್ ಗಳು ಸೆಪ್ಟೆಂಬರ್ 26, 2020ಕ್ಕೆ ಕೊನೆಯಾಗಲಿವೆ ಎಂದು ನ್ಯಾಯಾಲಯದ ಗಮನಸೆಳೆದರು. “ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ರಫ್ತು ಬಿಲ್‌ಗಳನ್ನು ನೀಡಿರುವುದರಿಂದ ಅವುಗಳ ಅವಧಿ ಮುಗಿದಿದೆ” ಎಂದು ಅಂತಿಮ ಆದೇಶ ಹೊರಬೀಳುವವರೆಗೆ ಹೇಳುವಂತಿಲ್ಲ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ತೋಟಗಾರಿಕಾ ಉತ್ಪನ್ನಗಳ ರಫ್ತುದಾರರ ಸಂಸ್ಥೆಯ ಪರವಾಗಿ ಇಂಡಿಯಾ ಲಾ ಅಲೈನ್ಸ್‌ನ ಡಾ. ಸುಜಯ್ ಕಾಂತವಲ್ಲಾ ಅರ್ಜಿ ಸಲ್ಲಿಸಿದ್ದರು. ಕಸ್ಟಮ್ಸ್ ಅಧಿಕಾರಿಗಳನ್ನು ಅಡ್ವೊಕೇಟ್ ಆನ್ ರೆಕಾರ್ಡ್‌ ಆದ ವಕೀಲ ಜೆ ಬಿ ಮಿಶ್ರಾ ಪ್ರತಿನಿಧಿಸಿದ್ದರು.