Prisoner
Prisoner 
ಸುದ್ದಿಗಳು

ಚಿಕಿತ್ಸೆ ದೊರೆಯದೆ ಕೈದಿ ಮರಣ: ₹10 ಲಕ್ಷ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶ

Bar & Bench

ಜೈಲು ಅಧಿಕಾರಿಗಳು ಚಿಕಿತ್ಸೆ ನಿರಾಕರಿಸಿದ್ದರಿಂದ ವಿಚಾರಣಾಧೀನ ಕೈದಿಯೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತನ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ಔರಂಗಾಬಾದ್ ಪೀಠ ಇತ್ತೀಚೆಗೆ ಆದೇಶಿಸಿದೆ. [ವಿಷ್ಣು ಸಂದೀಪನ್‌ ಕುಟೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಕೈದಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಆರ್‌ ಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಮೃತ ಕೈದಿ ಕೇವಲ 32 ವರ್ಷದ ಯುವಕನಾಗಿದ್ದು ಪತ್ನಿ, ಮಕ್ಕಳು ಹಾಗೂ ಆತನ ಪೋಷಕರು ಆತನ ಮೇಲೆ ಅವಲಂಬಿತರಾಗಿದ್ದರು. ಜೊತೆಗೆ ಆತ ಗಂಭೀರ ಸ್ವರೂಪದ ಅಪರಾಧ ಎಸಗಿ ಕಠಿಣ ಶಿಕ್ಷೆ ಅನುಭವಿಸುತ್ತಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವೈದ್ಯಕೀಯ ಚಿಕಿತ್ಸೆ ನೀಡದ ಜೈಲು ಅಧಿಕಾರಿಗಳ ವೈಫಲ್ಯದಿಂದಾಗಿ ಆತ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ವಿಶೇಷವಾಗಿ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತನಾದ ಖೈದಿಗೆ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಆರೋಗ್ಯದ ಹಕ್ಕನ್ನು ನಿರ್ಲಕ್ಷಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದು ಜೀವಿಸುವ ಹಕ್ಕು ಘನತೆಯಿಂದ ಬದುಕುವ ಹಕ್ಕನ್ನೂ ಒಳಗೊಂಡಿದೆ ಎಂದಿತು.

“ಆದ್ದರಿಂದ ಕೈದಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದು, ಕೈದಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಮತ್ತು ಅವರನ್ನು ಮಾನವ ಘನತೆಯಿಂದ ನಡೆಸಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೇಳುವ ಅಗತ್ಯವಿಲ್ಲ. ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ, ಆದ್ದರಿಂದ ಅರ್ಜಿ ಸಲ್ಲಿಸಿರುವ ಮೃತನ ಪೋಷಕರು, ಪತ್ನಿ ಹಾಗೂ ಮಕ್ಕಳು ಪರಿಹಾರ ಪಡೆಯಲು ಅರ್ಹರು” ಎಂದು ಪೀಠ ಹೇಳಿದೆ.

"ಮೃತ ವ್ಯಕ್ತಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಜೈಲಿನ ಅಧೀಕ್ಷಕ ಮತ್ತಿತರರ ಕರ್ತವ್ಯವಾಗಿತ್ತು. ಕಾನ್‌ಸ್ಟೇಬಲ್‌ ಒಬ್ಬರು ಉಲ್ಲೇಖಿಸಿರುವ ದಾಖಲೆಗಳು ಪೊಲೀಸ್‌ ಅಧಿಕಾರಿಗಳು ಮತ್ತು ಜೈಲು ಅಧಿಕಾರಿಗಳ ನಿರ್ದಯ ಮತ್ತು ಸಂವೇದನಾರಹಿತ ಮನಸ್ಥಿತಿಯನ್ನು ಬಿಂಬಿಸುತ್ತವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Vishnu_Sandipan_Kute_vs_State_of_Meghalaya.pdf
Preview