ಜಿ ಎನ್ ಸಾಯಿಬಾಬಾ ಮತ್ತು ಬಾಂಬೆ ಹೈಕೋರ್ಟ್ ನಾಗಪುರ ಪೀಠ 
ಸುದ್ದಿಗಳು

ಮಾವೋವಾದಿ ನಂಟು ಪ್ರಕರಣ: ಪ್ರೊ. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್‌

ಹೈಕೋರ್ಟ್‌ನ ಖುಲಾಸೆ ಆದೇಶವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ತಳ್ಳಿಹಾಕಿತ್ತು. ಇದೀಗ ಸಾಯಿಬಾಬಾ ಅವರ ಮೇಲ್ಮನವಿಯನ್ನು ಮರುಪರಿಶೀಲಿಸಿರುವ ಹೈಕೋರ್ಟ್‌ ಪೀಠ ಈ ತೀರ್ಪು ನೀಡಿದೆ.

Bar & Bench

ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ ಎನ್ ಸಾಯಿಬಾಬಾ ಹಾಗೂ ಐವರು ಆರೋಪಿಗಳನ್ನು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಮಂಗಳವಾರ ಖುಲಾಸೆಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್.ಎ.ಮೆನೆಜಸ್ ಅವರ ನ್ಯಾಯಪೀಠ 2017ರಲ್ಲಿ ಸಾಯಿಬಾಬಾ ಮತ್ತು ಇತರರನ್ನು ತಪ್ಪಿತಸ್ಥರೆಂದು ಘೋಷಿಸಿದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿತು.

ಸರ್ಕಾರದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ನಿರ್ಧರಿಸುವವರೆಗೆ ತಲಾ 50,000 ರೂ ಜಾಮೀನು ಬಾಂಡ್‌ ಠೇವಣಿ ಪಡೆದು ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಸಂಬಂಧಪಟ್ಟಂತೆ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಸರ್ಕಾರ ಕೇಳಲಿಲ್ಲ.

ದೈಹಿಕವಾಗಿ ವಿಕಲಚೇತನರಾಗಿರುವ ಪ್ರೊ. ಸಾಯಿಬಾಬಾ ಅವರನ್ನು ಹೈಕೋರ್ಟ್‌ ಅಕ್ಟೋಬರ್ 14, 2022 ರಂದು ಖುಲಾಸೆಗೊಳಿಸಿತ್ತು. ಇದನ್ನು ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್‌ ಮತ್ತೆ ಪ್ರಕರಣ ಆಲಿಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.

ಸಿಆರ್‌ಪಿಸಿ ಸೆಕ್ಷನ್ 465ರ ದೃಷ್ಟಿಯಿಂದ ಅನುಮತಿ ನೀಡಲು ವಿಫಲವಾದರೆ ಖುಲಾಸೆಗೆ ಕಾರಣವಾಗುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಹೈಕೋರ್ಟ್‌ ತೀರ್ಪನ್ನು ಅಮಾನತಿನಲ್ಲಿರಿಸಿತ್ತು.

ಸುದೀರ್ಘ ವಿಚಾರಣೆಯ ನಂತರ, ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಸುಪ್ರೀಂ ಪೀಠ ಏಪ್ರಿಲ್ 19, 2023 ರಂದು ಹೈಕೋರ್ಟ್‌ ಖುಲಾಸೆ ತೀರ್ಪನ್ನು ಬದಿಗೆ ಸರಿಸಿತು. ಜೊತೆಗೆ ಹೊಸದಾಗಿ ಪ್ರಕರಣ ಆಲಿಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.

ಆದೇಶದಂತೆ ಅರ್ಜಿಯನ್ನು ಮರುಪರಿಶೀಲಿಸಿರುವ ಹೈಕೋರ್ಟ್‌ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದೆ.

ಕುತೂಹಲಕಾರಿ ಸಂಗತಿಯೆಂದರೆ, ಸಾಯಿಬಾಬಾ ಅವರನ್ನು ಈ ಹಿಂದೆ ಖುಲಾಸೆಗೊಳಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ರೋಹಿತ್ ದೇವ್ ಅವರು ಆಗಸ್ಟ್ 2, 2023ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್.ಎ.

ಸಾಯಿಬಾಬಾ (54) ಗಾಲಿಕುರ್ಚಿ ಆಶ್ರಯಿಸಿ ಬದುಕುತ್ತಿದ್ದು, ಶೇ 99ರಷ್ಟು ಅಂಗವಿಕಲರಾಗಿದ್ದಾರೆ. ಪ್ರಸ್ತುತ ಅವರನ್ನು ನಾಗಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.