Liquor Alcohol Image for representative purpose
ಸುದ್ದಿಗಳು

ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಜೂನ್ 4ರಂದೇ ಮುಂಬೈನಲ್ಲಿ ಮದ್ಯ ಮಾರಾಟ: ಬಾಂಬೆ ಹೈಕೋರ್ಟ್ ಅನುಮತಿ

Bar & Bench

ಲೋಕಸಭೆ ಚುನಾವಣೆಯ ಮತ ಎಣಿಕೆ ದಿನವಾದ ಜೂನ್ 4ರಂದು ಫಲಿತಾಂಶ ಘೋಷಣೆಯಾದ ಬಳಿಕ ಮುಂಬೈನ ಹೋಟೆಲ್‌ಗಳು ಮತ್ತು ಮದ್ಯದಂಗಡಿಗಳು ಮದ್ಯ ಮಾರಾಟ ಮಾಡಲು ಬಾಂಬೆ ಹೈಕೋರ್ಟ್‌ ಅನುಮತಿ ನೀಡಿದೆ [ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ರಾಜ್ಯ ಅಬಕಾರಿ ಇಲಾಖೆ ಮುಂಬೈ ಉಪನಗರ ಕಲೆಕ್ಟರ್‌ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಎನ್‌ ಆರ್ ಬೋರ್ಕರ್ ಮತ್ತು ಸೋಮಶೇಖರ್ ಸುಂದರೇಶನ್ ಅವರಿದ್ದ ರಜಾಕಾಲೀನ ಪೀಠ ಶುಕ್ರವಾರ ಈ ಆದೇಶ ನೀಡಿದೆ.

ಸಂಸತ್‌ ಚುನಾವಣೆ ಗಮನದಲ್ಲಿಟ್ಟುಕೊಂಡು ಮದ್ಯಪಾನ ಪರವಾನಗಿಗಳ ಕಾರ್ಯಾಚರಣೆಯನ್ನು ನಿಷೇಧಿಸಿ ಏಪ್ರಿಲ್ 2 ರಂದು ರಾಜ್ಯ ಅಬಕಾರಿ ಇಲಾಖೆಯ ಮುಂಬೈ ನಗರ ಕಲೆಕ್ಟರ್ ಅವರು ಹೊರಡಿಸಿದ್ದ ಆದೇಶವನ್ನು ಅದು ಮಾರ್ಪಡಿಸಿದೆ.

ಫಲಿತಾಂಶ ಘೋಷಣೆಯ ನಂತರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿರ್ಬಂಧವನ್ನು ರದ್ದುಗೊಳಿಸಿ ಸಮನ್ವಯ ಪೀಠ ಮೇ 3ರಂದು ನೀಡಿದ್ದ ಆದೇಶವನ್ನು ಆಧರಿಸಿ ರಜಾಕಾಲೀನ ಪೀಠ ಈ ಆದೇಶ ನೀಡಿತು.

ಜೂನ್ 4 ರಂದು ಡ್ರೈ ಡೇ (ಮದ್ಯ ಮಾರಾಟ ಹಾಗೂ ಸೇವನೆ ನಿಷೇಧ ದಿನ) ಆಚರಿಸಬೇಕೆಂದು ಘೋಷಿಸಿದ ಏಪ್ರಿಲ್ 2 ರ ಸುತ್ತೋಲೆಯನ್ನು ಪ್ರಶ್ನಿಸಿ ಇಂಡಿಯನ್ ಹೋಟೆಲ್ ಮತ್ತು ರೆಸ್ಟರಂಟ್‌ ಅಸೋಸಿಯೇಷನ್ (ಎಎಚ್‌ಎಆರ್‌) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಎಎಚ್‌ಎಆರ್ ಪರ ವಕೀಲರಾದ ವೀಣಾ ಥಡಾನಿ, ಮತ ಎಣಿಕೆ ಮುಗಿದು ಮಧ್ಯಾಹ್ನವೇ ನಂತರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದ್ದರೂ ಜೂನ್ 4 ರಂದು ಇಡೀ ದಿನ ನಿಷೇಧ ಹೇರಲಾಗಿದೆ ಎಂದು ದೂರಿದರು.  

ನಿರ್ಧಾರ ಪರಿಶೀಲಿಸುವಂತೆ ಕಲೆಕ್ಟರ್‌ ಅವರನ್ನು ಸಂಪರ್ಕಿಸಿದೆವಾದರೂ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ದೇಶನ ಇರುವುದರಿಂದ ಆದೇಶ ಬದಲಾಯಿಸಲಾಗದು ಎಂದು ಪ್ರತಿಕ್ರಿಯೆ ಬಂತು ಎಂಬುದಾಗಿ ಎಎಚ್‌ಎಆರ್‌ ನ್ಯಾಯಾಲಯಕ್ಕೆ ತಿಳಿಸಿತು.

ಮದ್ಯ ಮಾರಾಟದ ಅಧಿಕೃತ ಮಳಿಗೆಗಳನ್ನು ಮುಚ್ಚಿದಾಗಲೆಲ್ಲಾ ಅಕ್ರಮ ವ್ಯವಹಾರಗಳು ತಲೆ ಎತ್ತಿ ದೊಡ್ಡ ಲಾಭವನ್ನು ಗಳಿಸುತ್ತವೆ ಎಂದು ಅದು ತಿಳಿಸಿತ್ತು.

ಫಲಿತಾಂಶ ಪ್ರಕಟವಾಗುವವರೆಗೆ ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಮಿತಿಗೊಳಿಸಿ ಮುಂಬೈ ಉಪನಗರ ಜಿಲ್ಲಾಧಿಕಾರಿ ತಮ್ಮ ಆದೇಶ ಮಾರ್ಪಡಿಸಿದ್ದಾರೆ ಎಂದು ಹೆಚ್ಚುವರಿ ಸರ್ಕಾರಿ ವಕೀಲರಾದ ಜ್ಯೋತಿ ಚವಾಣ್ ಪೀಠಕ್ಕೆ ತಿಳಿಸಿದರು.

ಆದರೆ, ಅಂತಹ ಮಾರ್ಪಾಡನ್ನು ಮುಂಬೈ ನಗರ ಕಲೆಕ್ಟರ್ ಮಾಡಿಲ್ಲ. ಎಲ್ಲಾ ಪ್ರದೇಶಗಳಲ್ಲಿ ಸಮಾನತೆ ಇರುವ ಅಗತ್ಯವಿದೆ ಎಂದ ನ್ಯಾಯಾಲಯ ಚುನಾವಣಾ ಫಲಿತಾಂಶ ಘೋಷಣೆ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು.