ವ್ಯಾಜ್ಯ ಇತ್ಯರ್ಥಪಡಿಸುವ ಸಲುವಾಗಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪ್ರಕಟಿಸಲಾದ ಮಾನಹಾನಿಕರ ವಿಷಯವನ್ನು ತೆಗೆದುಹಾಕುವಂತೆ ನಟನ ಸಹೋದರನಿಗೆ ಬಾಂಬೆ ಹೈಕೋರ್ಟ್ ಬುಧವಾರ ಸೂಚಿಸಿದೆ.
ಪ್ರಕರಣ ಇತ್ಯರ್ಥದ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚಿಸಲು ಮೇ 3, 2023ರಂದು ಸಹೋದರರಿಬ್ಬರೂ ತಮ್ಮ ವಕೀಲರೊಂದಿಗೆ ತನ್ನ ಕೊಠಡಿಗೆ ಬರುವಂತೆ ನ್ಯಾ. ಆರ್ ಐ ಚಗ್ಲಾ ಸೂಚಿಸಿದರು.
ತಮ್ಮ ಸಹೋದರ ಶಂಶುದ್ದೀನ್ ಮತ್ತು ತನ್ನ ಮಾಜಿ ಪತ್ನಿ ಅಂಜನಾ ಪಾಂಡೆ ಅಲಿಯಾಸ್ ಝೈನಾಬ್ ಸಿದ್ದಿಕಿ ಅವರು ತಪ್ಪುದಾರಿಗೆಳೆಯುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಕೀಲ ಸುನಿಲ್ ಕುಮಾರ್ ಅವರ ಮೂಲಕ ಹೂಡಲಾದ ಮಾನನಷ್ಟ ಮೊಕದ್ದಮೆಯಲ್ಲಿ ನಟ ನವಾಜುದ್ದೀನ್ ದೂರಿದ್ದರು.
ಸಿದ್ದಿಕಿ ಪರ ವಾದ ಮಂಡಿಸಿದ ವಕೀಲ ಡಾ. ಅಭಿನವ್ ಚಂದ್ರಚೂಡ್ “ತಮ್ಮ ಕಕ್ಷಿದಾರ ಮತ್ತು ಪಾಂಡೆ ಅವರ ನಡುವೆ ಪ್ರಕರಣ ಇತ್ಯರ್ಥಗೊಳಿಸುವ ಮಾತುಕತೆ ನಡೆಯುತ್ತಿರುವುದರಿಂದ ಆಕೆಯ ವಿರುದ್ಧ ನಿರ್ದಿಷ್ಟವಾಗಿ ಯಾವುದೇ ಪರಿಹಾರ ಕೋರಿಲ್ಲ” ಎಂದು ತಿಳಿಸಿದರು.
ಶಂಶುದ್ದೀನ್ ಪರ ವಾದ ಮಂಡಿಸಿದ ವಕೀಲ ರೂಮಿ ಮಿರ್ಜಾ, ಸಹೋದರರ ನಡುವಿನ ಪ್ರಕರಣವನ್ನು ಇತ್ಯರ್ಥಗೊಳಿಸಲು ತಮ್ಮ ಘನ ಕಚೇರಿಯನ್ನು ಬಳಸಿಕೊಳಬೇಕು ಎಂದು ನ್ಯಾ. ಚಗ್ಲಾ ಅವರಲ್ಲಿ ವಿನಂತಿಸಿದರು.
ಇದನ್ನು ವಕೀಲ ಅಭಿನವ್ ಶ್ಲಾಘಿಸಿದರಾದರೂ ಅವರು “ನಟನ ಸಹೋದರ ನೀಡಿರುವ ಹೇಳಿಕೆಗಳು ಆನ್‌ಲೈನ್ ಪೋಸ್ಟ್‌ಗಳ ರೂಪದಲ್ಲಿವೆ. ಮಾನಹಾನಿಕರ ವಿಷಯಗಳನ್ನು ಪ್ರಕಟಿಸದಂತೆ ಶಂಶುದ್ದೀನ್ ಅವರನ್ನು ನಿರ್ಬಂಧಿಸಬೇಕು. ಈಗಿರುವ ಹೇಳಿಕೆಗಳನ್ನು ತೆಗೆದು ಹಾಕುವಂತೆ ಸೂಚಿಸಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು.
ಮಾರ್ಚ್‌ನಲ್ಲಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ, ನವಾಜುದ್ದೀನ್ ಅವರು ತಮ್ಮ ಸಹೋದರ ಮತ್ತು ತನ್ನ ಮಾಜಿ ಪತ್ನಿ ₹ 100 ಕೋಟಿಗಳಷ್ಟು ಪರಿಹಾರ ನೀಡಬೇಕೆಂದು ಕೋರಿದ್ದರು. ಮಾಧ್ಯಮ ಅಥವಾ ಇನ್ನಾವುದೇ ವೇದಿಕೆಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶಾಶ್ವತ ನಿರ್ಬಂಧ ವಿಧಿಸಬೇಕು. ಅಲ್ಲದೆ ಅವರಿಬ್ಬರೂ ಸಾರ್ವಜನಿಕವಾಗಿ ತಮ್ಮ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದರು.