ತನ್ನ ತಂಪು ಪಾನೀಯ ಕೆನಡಾ ಡ್ರೈಯನ್ನು 2001 ರಲ್ಲಿ ಕಲಬೆರಕೆ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ . ಹಿಂದೂಸ್ತಾನ್ ಕೋಕಾ-ಕೋಲಾ ಪಾನೀಯ ಕಂಪೆನಿ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಬುಧವಾರ ನಿರಕಾರಿಸಿದೆ [ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಪ್ರಕರಣವನ್ನು ಪ್ರಸ್ತುತ ಜಲ್ನಾದ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ವಶಪಡಿಸಿಕೊಂಡ ಸರಕನ್ನು ಮರು ಮರೀಕ್ಷೆ ಮಾಡುವ ತನ್ನ ಕಾನೂನು ಬದ್ಧ ಹಕ್ಕನ್ನು ಪ್ರಾಸಿಕ್ಯೂಷನ್ ವಿಳಂಬ ಕಸಿದುಕೊಂಡಿದ್ದು ಈ ಕಾರಣಕ್ಕಾಗಿ ಪ್ರಕರಣ ರದ್ದುಗೊಳಿಸುವಂತೆ ಹಿಂದೂಸ್ತಾನ್ ಕೋಕಾ ಕೋಲಾ ಕೋರಿತ್ತು.
ಆದರೆ ಇದನ್ನು ತಿರಸ್ಕರಿಸಿದ ನ್ಯಾಯಮೂರ್ತಿ ವೈ ಜಿ ಖೋಬ್ರಾಗಡೆ ಅವರಿದ್ದ ಪೀಠ, ಕೇಂದ್ರೀಯ ಪ್ರಯೋಗಾಲಯಕ್ಕೆ ಎರಡನೇ ವಿಶ್ಲೇಷಣೆಗಾಗಿ ಮಾದರಿಗಳನ್ನು ಕಳುಹಿಸಲು ಆರೋಪಿ ಅರ್ಜಿ ಸಲ್ಲಿಸಿದ್ದರೆ ಮಾತ್ರ ಅಂತಹ ಹಕ್ಕನ್ನು ಪಡೆಯಬಹುದು ಎಂದು ತಿಳಿಸಿತು.
ಡಿಸೆಂಬರ್ 12, 2001ಕ್ಕೆ ಮುಕ್ತಾಯ ದಿನಾಂಕ ಇದ್ದ 'ಕೆನಡಾ ಡ್ರೈ'ನ 321 ಬಾಟಲಿಗಳನ್ನು ಜುಲೈ 27, 2001ರಂದು ವಶಪಡಿಸಿಕೊಳ್ಳಲಾಗಿತ್ತು. ಜೂನ್ 2002ರಲ್ಲಿ ಅದನ್ನು ನಾಶಪಡಿಸಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಹಿಂದೂಸ್ತಾನ್ ಕೋಕಾ ಕೋಲಾ ಸೇರಿದಂತೆ ಆರೋಪಿಗಳಿಗೆ ಕಲಬೆರಕೆ ಉತ್ಪನ್ನವನ್ನು ನಾಶಪಡಿಸುವ ಮುನ್ನ ಮರುಪರೀಕ್ಷಿಸಬೇಕು ಎಂದು ಕೋರುವ ಮೂಲಕ ತನ್ನ ಹಕ್ಕನ್ನು ಚಲಾಯಿಸಲು ಸಾಕಷ್ಟು ಅವಕಾಶವಿದ್ದರೂ ಅದನ್ನು ಚಲಾಯಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ದೂರು ಸಲ್ಲಿಸುವಲ್ಲಿ 16 ತಿಂಗಳ ವಿಳಂಬ ಉಂಟಾಗಿರುವುದರಿಂದ ಆಹಾರ ಕಲಬೆರಕೆ ತಡೆ ಕಾಯಿದೆಯ ಸೆಕ್ಷನ್ 13 (2) ರ ಅಡಿಯಲ್ಲಿ ಕಾನೂನು ಹಕ್ಕು ಚಲಾಯಿಸುವುದನ್ನು ತಡೆಯುತ್ತದೆ ಎಂದು ಹಿಂದೂಸ್ತಾನ್ ಕೋಕಾ-ಕೋಲಾ ವಾದಿಸಿತ್ತು. ಈ ವಿಳಂಬ ಆಹಾರ ಮಾದರಿಯ ಎರಡನೇ ವಿಶ್ಲೇಷಣೆಗೆ ಮನವಿ ಮಾಡಲು ತನಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ ಪ್ರಕರಣ ರದ್ದುಗೊಳಿಸುವಂತೆ ಅದು ಕೋರಿತ್ತು.
ಆದರೆ ಈ ವಾದವನ್ನು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಬಲವಾಗಿ ವಿರೋಧಿಸಿದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 482 ರ ಅಡಿಯಲ್ಲಿ ವಿಚಾರಣೆಯನ್ನು ರದ್ದುಗೊಳಿಸುವ ವಿನಂತಿಯನ್ನು ನಿರ್ವಹಿಸಲಾಗುವುದಿಲ್ಲ. ದೂರನ್ನು ಸಲ್ಲಿಸುವಲ್ಲಿನ ವಿಳಂಬ ಪ್ರಾಸಿಕ್ಯೂಷನ್ ಅನ್ನು ಅಮಾನ್ಯ ಮಾಡುವುದಿಲ್ಲ. ಅಲ್ಲದೆ ಆಹಾರ ಸುರಕ್ಷತೆ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆಗಳಿಗೆ ಹೆಚ್ಚು ಬದ್ಧವಾಗಿರಬೇಕು ಎಂದು ಅವರು ಹೇಳಿದರು.
ಪ್ರತಿವಾದಿ ಸರ್ಕಾರದ ವಾದ ಪರಿಗಣಿಸಿದ ನ್ಯಾಯಾಲಯ ಹಿಂದೂಸ್ತಾನ್ ಕೋಕಾ ಕೋಲಾ ಅರ್ಜಿಯನ್ನು ವಜಾಗೊಳಿಸಿತು.