Adipurush 
ಸುದ್ದಿಗಳು

ʼಆದಿಪುರುಷ್‌ʼ ಸಿನಿಮಾದಲ್ಲಿ ದೊರೆಯದ ಮನ್ನಣೆ: ತ್ರಿಶೂಲ್‌ ಮೀಡಿಯಾ ಕೋರಿಕೆಗೆ ಬಾಂಬೆ ಹೈಕೋರ್ಟ್‌ ನಕಾರ

ತನಗೆ ಸೂಕ್ತ ಮನ್ನಣೆ ನೀಡುವವರೆಗೆ ಸಿನಿಮಾ ಬಿಡುಗಡೆ ತಡೆ ನೀಡಬೇಕು ಎಂದು ವಿಎಫ್‌ಎಕ್ಸ್‌ ಸ್ಟುಡಿಯೊ ಕಂಪೆನಿ ತ್ರಿಶೂಲ್‌ ಮೀಡಿಯಾ ಎಂಟರ್‌ಟೈನ್‌ಮೆಂಟ್‌ ಕೋರಿತ್ತು.

Bar & Bench

ದೇಶಾದ್ಯಂತ ಇಂದು ತೆರೆಕಾಣುತ್ತಿರುವ ಬಹುಭಾಷಾ ಚಿತ್ರ ʼಆದಿಪುರುಷ್‌ʼನಲ್ಲಿ ತನ್ನ ಕೆಲಸಕ್ಕೆ ಸೂಕ್ತ ಶೀರ್ಷಿಕೆ ಮನ್ನಣೆ (ಕ್ರೆಡಿಟ್‌) ದೊರಕಬೇಕೆಂದು ಕೋರಿ ಸಿನಿಮಾದಲ್ಲಿ ವಿಶೇಷ ದೃಶ್ಯೀಕರಣಗಳ ನಿರ್ವಹಣೆ ಮಾಡಿರುವ ವಿಎಫ್‌ಎಕ್ಸ್‌ ಸ್ಟುಡಿಯೋ ಸಂಸ್ಥೆ ತ್ರಿಶೂಲ್‌ ಮೀಡಿಯಾ ಎಂಟರ್‌ಟೈನ್‌ಮೆಂಟ್‌ ಸಲ್ಲಿಸಿದ್ದ ಅರ್ಜಿಗೆ ತಕ್ಷಣಕ್ಕೆ ಪರಿಹಾರ ಒದಗಿಸಲು ಬಾಂಬೆ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

ಸಿನಿಮಾದ ಸಹ ನಿರ್ಮಾಣ ಸಂಸ್ಥೆಯಾದ ಸೂಪರ್‌ ಕ್ಯಾಸೆಟ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಟಿ-ಸೀರಿಸ್‌) ಅನ್ನು ದಾವೆಯಲ್ಲಿ ಪಕ್ಷಕಾರರನ್ನಾಗಿ ಮಾಡಲಾಗಿಲ್ಲ ಎಂದು ನ್ಯಾಯಮೂರ್ತಿ ಆರ್‌ ಐ ಚಗ್ಲ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ತಿಳಿಸಲಾಯಿತು.

ಟಿ-ಸೀರಿಸ್‌ ಪ್ರತಿನಿಧಿಸಿದ್ದ ವಕೀಲರು, ತಮ್ಮನ್ನು ದಾವೆಯಲ್ಲಿ ಕಕ್ಷಿದಾರರನ್ನಾಗಿಸದೇ ಸಿನಿಮಾ ತಡೆಗೆ ಸಂಬಂಧಿಸಿದಂತೆ ತುರ್ತಾಗಿ ಅರ್ಜಿಯನ್ನು ವಿಚಾರಣೆ ನಡೆಸಲಾಗದು ಎಂದು ಆಕ್ಷೇಪಿಸಿದರು.

ತ್ರಿಶೂಲ್‌ ಪ್ರತಿನಿಧಿಸಿದ್ದ ವಕೀಲ ಅಭಿನವ್‌ ಚಂದ್ರಚೂಡ್‌ ಅವರು ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಒತ್ತಾಯಿಸಲು ಕಂಪೆನಿ ಬಯಸಿಲ್ಲ ಎಂದರು.

ಇದನ್ನು ಆಲಿಸಿದ ಪೀಠವು ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.

ಆದಿಪುರುಷ್‌ ಸಿನಿಮಾ ನಿರ್ಮಿಸಿರುವ ರೆಟ್ರೋಫಿಲಿಸ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆ ವಿಎಫ್‌ಎಕ್ಸ್‌ ಸ್ಟುಡಿಯೊ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತ್ರಿಶೂಲ್‌ ಅರ್ಜಿಯಲ್ಲಿ ವಿವರಿಸಿದೆ.

ತಮಗಾಗಿರುವ ನಷ್ಟ ₹4,77,31,321 ತುಂಬಿಕೊಡಬೇಕು ಎಂದು ತ್ರಿಶೂಲ್‌ ತನ್ನ ಅರ್ಜಿಯಲ್ಲಿ ಕೋರಿದೆ. ಸಿನಿಮಾ ನಿರ್ಮಿಸುವುದಕ್ಕಾಗಿ ನಿರ್ಮಾಣ ಕಂಪೆನಿ ಆರಂಭಿಸಲಾಗಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಸಂಸ್ಥೆಯನ್ನು ಮುಚ್ಚುವ ಸಾಧ್ಯತೆ ದಟ್ಟವಾಗಿದೆ ಎಂಬ ಆತಂಕವನ್ನು ವ್ಯಕ್ತಪಡಿಸಲಾಗಿದೆ. ಬಾಕಿ ಪಾವತಿಗೆ ಸಂಬಂಧಿಸಿದ ಸಭೆಯಲ್ಲಿ ತ್ರಿಶೂಲ್‌ಗೆ ಮನ್ನಣೆ ನೀಡಲು ರೆಟ್ರೋಫೈಲ್ಸ್ ನಿರಾಕರಿಸಿತು ಎನ್ನಲಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ತನ್ನ ಹಕ್ಕು ಜಾರಿಗಾಗಿ ಮತ್ತು ಬಾಕಿ ಪಾವತಿಸುವಂತೆ ಕೋರುವ ಸ್ಥಿತಿಯಲ್ಲಿ ತಾನು ಇರುವುದಿಲ್ಲ. ಹೀಗಾಗಿ, ತುರ್ತು ಪರಿಹಾರ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ತ್ರಿಶೂಲ್‌ ತಿಳಿಸಿದೆ.

ಸಿನಿಮಾದಲ್ಲಿ ವಿಎಫ್‌ಎಕ್ಸ್‌ ಸ್ಟುಡಿಯೊಗೆ ಸೂಕ್ತ ಮನ್ನಣೆ ನೀಡಲು ರೆಟ್ರೋಫೈಲ್ಸ್‌ಗೆ ಆದೇಶಿಸಬೇಕು. ಸಿನಿಮಾದಲ್ಲಿ ಅದನ್ನು ಅಳವಡಿಸುವವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಬೇಕು. ಪಕ್ಷಕಾರರ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ ಬಾಕಿ ಹಣವನ್ನು ಠೇವಣಿ ಇಡಲು ಆದೇಶಿಸಬೇಕು ಎಂದು ತ್ರಿಶೂಲ್‌ ನ್ಯಾಯಾಲಯಕ್ಕೆ ಕೋರಿತ್ತು.

ಪ್ರತಿವಾದಿಗಳ ಪರ ವಕೀಲರು ತ್ರಿಶೂಲ್‌ಗೆ ಮನ್ನಣೆ ನೀಡಿರುವುದಕ್ಕೆ ಸಂಬಂಧಿಸಿದ ಫೋಟೊಗಳನ್ನು ಪ್ರಸ್ತುತಪಡಿಸಿದರು.

ಇದನ್ನು ಪರಿಗಣಿಸಿದ ನ್ಯಾಯಾಲಯವು ತ್ರಿಶೂಲ್‌ಗೆ ಮನ್ನಣೆ ಸಂಬಂಧಿಸಿದ ವಿಷಯವು ಪರಿಹಾರವಾಗಿದೆ ಎಂದಿದ್ದು, ಬಾಕಿ ಹಣ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ರೆಟ್ರೋಫೈಲ್ಸ್‌ಗೆ ಆದೇಶಿಸಿದೆ.