Narayan Rane and Bombay High Court 
ಸುದ್ದಿಗಳು

ಕೇಂದ್ರ ಸಚಿವ ರಾಣೆ ಬಂಗಲೆ 2 ವಾರಗಳಲ್ಲಿ ಕೆಡವಲು ಬಾಂಬೆ ಹೈಕೋರ್ಟ್ ಆದೇಶ: ಕಂಪೆನಿಗೆ ₹10 ಲಕ್ಷ ದಂಡ

ಎರಡನೇ ಸಕ್ರಮ ಅರ್ಜಿಯನ್ನು ವಿಚಾರಣೆ ಮಾಡಲಾಗದು ಎಂದು ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಕಮಲ್ ಖಾತಾ ಅವರಿದ್ದ ಪೀಠ ಹೇಳಿತು.

Bar & Bench

ಕೇಂದ್ರ ಸಚಿವ ನಾರಾಯಣ ರಾಣೆ ಅವರ ಕುಟುಂಬದ ಕಂಪನಿಗೆ ಸೇರಿದ ಬಂಗಲೆಯ ಅಕ್ರಮ ಭಾಗಗಳನ್ನು 2 ವಾರಗಳಲ್ಲಿ ನೆಲಸಮಗೊಳಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಆದೇಶಿಸಿದೆ.

ಅಲ್ಲದೆ, ನ್ಯಾಯಮೂರ್ತಿಗಳಾದ ಆರ್‌ ಡಿ ಧನುಕಾ ಮತ್ತು ಕಮಲ್ ಖಾತಾ ಅವರಿದ್ದ ಪೀಠವು ರಾಣೆ ಅವರ ಕಂಪೆನಿಗೆ ₹ 10 ಲಕ್ಷ ದಂಡ ವಿಧಿಸಿದ್ದು ಅದನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೆಸರಿನಲ್ಲಿ ಠೇವಣಿ ಇಡುವಂತೆ ಸೂಚಿಸಿತು. ಇದೇ ವೇಳೆ ಎರಡನೇ ಸಕ್ರಮ ಅರ್ಜಿಯನ್ನು ಬಿಎಂಸಿ  ಪರಿಗಣಿಸುವಂತೆ ನಿರ್ದೇಶಿಸಬೇಕು ಎಂಬ ರಾಣೆ ಅವರ ಅರ್ಜಿಯನ್ನು ಕೂಡ ಪೀಠ ವಜಾಗೊಳಿಸಿತು.

ರಾಣೆ ಅವರು ಎರಡನೇ ಬಾರಿಗೆ ಸಲ್ಲಿಸಿದ ಸಕ್ರಮ ಅರ್ಜಿಯನ್ನು ಪರಿಗಣಿಸದಂತೆ ಬಿಎಂಸಿಗೆ ನಿರ್ಬಂಧ ವಿಧಿಸುವಾಗ ಪೀಠವು, “ಪ್ರಸ್ತಾಪಿತ ಸಕ್ರಮ ಅರ್ಜಿಯನ್ನು ಅಂಗೀಕರಿಸಿದರೆ ಕಾನೂನಿನ ನಿಯಮಾವಳಿಗಳ ವ್ಯಾಪಕ/ ದೊಡ್ಡಮಟ್ಟದ ಉಲ್ಲಂಘನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂಬೈ ನಗರದಲ್ಲಿ ಎಷ್ಟೇ ದೊಡ್ಡಮಟ್ಟದ ಅಕ್ರಮ ಕಟ್ಟವನ್ನು ಯಾವುದೇ ದಂಡದ ಭಯವಿಲ್ಲದೆ ನಿರ್ಮಿಸಲು ತಪ್ಪಿತಸ್ಥರಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಹೇಳಿತು. ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಅವಕಾಶ ಮಾಡಿಕೊಡುವ ಸಲುವಾಗಿ ಅರು ವಾರಗಳ ಅವಧಿಗೆ ತಡೆಯಾಜ್ಞೆ ಕೋರಿದ ಅರ್ಜಿದಾರರ ಪರ ವಕೀಲ ಶಾರ್ದೂಲ್ ಸಿಂಗ್ ಅವರ ಪ್ರಾರ್ಥನೆಯನ್ನು ಕೂಡ ಪೀಠ ಮನ್ನಿಸಲಿಲ್ಲ.  

ಮುಂಬೈನ ಜುಹು ಪ್ರದೇಶದಲ್ಲಿ ನೆಲೆಗೊಂಡಿರುವ ಬಂಗಲೆಯನ್ನು ಸಕ್ರಮವಗೊಳಿಸುವಂತೆ ಬಿಎಂಸಿಗೆ ನಿರ್ದೇಶಿಸಬೇಕು ಎಂದು ರಾಣೆ ಅವರ ಕುಟುಂಬದ ಒಡೆತನದಲ್ಲಿರುವ ಕಂಪನಿಯಾದ ಕಾಲ್ಕಾ ರಿಯಲ್ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮನವಿ ಸಲ್ಲಿಸಿತ್ತು.