ಎದುರು ಪಕ್ಷಕಾರರ ಪರ ಹಾಜರಾಗುವ ನ್ಯಾಯವಾದಿಗಳ ವಿರುದ್ಧ ವಕೀಲರ ಪರಿಷತ್ತಿಗೆ ಕ್ಷುಲ್ಲಕ ದೂರು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಈಚೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಎದುರಾಳಿ ವಕೀಲರನ್ನು ನಿರುತ್ಸಾಹಗೊಳಿಸಲು ಮತ್ತು ಬೆದರಿಸಲು ಅಂತಹ ದೂರುಗಳನ್ನು ಬಳಸಲಾಗುತ್ತದೆ. ಇದರಿಂದ ಎದುರಾಳಿಗೆ ಸೂಕ್ತ ಕಾನೂನು ಪ್ರಾತಿನಿಧ್ಯ ದೊರೆಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
“ಎದುರಾಳಿ ವಕೀಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಿರಂತರ ಬೆದರಿಕೆಯನ್ನು ವಾಸ್ತವವಾಗಿ ಎದುರಾಳಿ ವಕೀಲರಿಗೆ ಸೂಕ್ತ ಕಾನೂನು ಪ್ರಾತಿನಿಧ್ಯ ದೊರೆಯಬಾರದು ಎಂಬ ಉದ್ದೇಶದಿಂದ ಅವರನ್ನು ನಿರುತ್ಸಾಹಗೊಳಿಸಲು ಮತ್ತು ಬೆದರಿಸಲು ಬಳಸಲಾಗುತ್ತದೆ” ಎಂದು ತನ್ನ 10 ಪುಟಗಳ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.
ಆದ್ದರಿಂದ, ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ಶಾಸ್ತ್ರಿ ವಿರುದ್ಧ ಸಲ್ಲಿಸಿದ್ದ ದೂರನ್ನು ವಜಾಗೊಳಿಸುವಂತೆ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್ತಿಗೆ (ಬಿಸಿಎಂಜಿ) ಪೀಠ ನಿರ್ದೇಶಿಸಿದೆ.
ದಾವೆದಾರರ ದೂರನ್ನು ಆಧರಿಸಿ ತಮ್ಮ ವಿರುದ್ಧ ಶಿಸ್ತು ಕ್ರಮ ಆರಂಭಿಸುವ ನಿಲುವು ಪ್ರಶ್ನಿಸಿ ಗೀತಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಫಿಡವಿಟ್‌ಗೆ ಸಹಿ ಹಾಕುವ ಕೆಲ ದಾಖಲೆಗಳಿಗೆ ಸಂಬಂಧಿಸಿದಂತೆ ಫೋರ್ಜರಿ ಮಾಡಿದ್ದಾರೆ ಎಂದು ವಕೀಲರೊಬ್ಬರು ಬಿಸಿಎಂಜಿಗೆ ದೂರು ನೀಡಿದ್ದರು.
ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಲಿಖಿತ ಹೇಳಿಕೆಯನ್ನು ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಲಾಗಿತ್ತು ಎಂಬುದಾಗಿ ಗೀತಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದು ನಕಲಿ ಎಂಬುದು ಸರ್ಕಾರದ ವಿರುದ್ಧ ವಾದಿಸುತ್ತಿದ್ದ ವಕೀಲರ ಅಭಿಪ್ರಾಯವಾಗಿತ್ತು.
ಈ ರೀತಿ ಸಹಿ ಹಾಕುವುದು ನ್ಯಾಯಾಂಗ ಆದೇಶದ ಪ್ರಕಾರ ಹೈಕೋರ್ಟ್‌ನಲ್ಲಿ ಪಾಲಿಸಲಾಗುತ್ತಿರುವ ಅಭ್ಯಾಸ ಎಂದು ಗೀತಾ ವಿವರಿಸಿದ್ದರು. ಈ ವಿವರಣೆಯಿಂದ ತೃಪ್ತರಾಗದ ವಕೀಲರು ಬಿಸಿಎಂಜಿಗೆ ದೂರಿತ್ತಿದ್ದರು.