ಆಸಿಡ್ ದಾಳಿಗೆ ತುತ್ತಾಗಿದ್ದ ಮೂವರು ಸಂತ್ರಸ್ತರಿಗೆ ಮಹಾರಾಷ್ಟ್ರ ಸಂತ್ರಸ್ತರ ಪರಿಹಾರ ಯೋಜನೆಯ ಭಾಗವಾಗಿ ತಲಾ ₹2 ಲಕ್ಷ ಹೆಚ್ಚುವರಿ ಪರಿಹಾರ ಪಾವತಿಸುವಂತೆ ಈಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಸಂತ್ರಸ್ತರು ಸರ್ಜಿಕಲ್ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಆರಂಭದಲ್ಲಿ ಅವರಿಗೆ ನೀಡಿದ್ದ ₹3 ಲಕ್ಷ ಪರಿಹಾರವನ್ನು ಚಿಕಿತ್ಸೆ ವೆಚ್ಚ ಮೀರಿದೆ. ಸರ್ಜಿಕಲ್ ಚಿಕಿತ್ಸೆಯ ಬಳಿಕ ಸಂತ್ರಸ್ತರು ಮತ್ತೆ ಮತ್ತೆ ಅದರ ಪರಿಶೀಲನಾ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸರ್ಜಿಕಲ್ ಚಿಕಿತ್ಸೆಯ ವೆಚ್ಚದ ಹೊರತಾಗಿ ಅವರು ಆರ್ಥಿಕ ಹೊರ ನಿಭಾಯಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರ ಸರ್ಕಾರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿದೆ ಎಂದು ನ್ಯಾಯಮೂರ್ತಿಗಳಾದ ಪಿ ಬಿ ವರಲೆ ಮತ್ತು ಮಾಧವ್ ಜಾಮ್‌ದಾರ್ ಹೇಳಿದ್ದಾರೆ.
“ಆರ್ಥಿಕ ನೆರವು ನೀಡುವುದಕ್ಕೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಸಾಮಾನ್ಯವಾಗಿ ದುರ್ಬಲ ವರ್ಗದ ಮಹಿಳೆಯರು ಮತ್ತು ಎರಡನೆಯದಾಗಿ, ನಿರ್ದಿಷ್ಟವಾಗಿ ಆಸಿಡ್ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ನಾವು ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ. ಮಹಾರಾಷ್ಟ್ರ ರಾಜ್ಯವು ಪ್ರಗತಿಪರ ರಾಜ್ಯವಾಗಿದ್ದು, ಇಂಥ ಸಂದರ್ಭದಲ್ಲಿ ಆಸಿಡ್ ದಾಳಿಯ ಸಂತ್ರಸ್ತರಿಗೆ ಅಗತ್ಯವಾದ ಹಣಕಾಸಿನ ನೆರವು ನೀಡುವ ವಿಚಾರದಲ್ಲಿ ಸಂತ್ರಸ್ತರ ಮೇಲೆ ಹೊರೆ ಹಾಕುವುದಿಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ” ಎಂದು ಆದೇಶದಲ್ಲಿ ಪೀಠ ಹೇಳಿದೆ.
ಆಸಿಡ್ ದಾಳಿ ಸಂತ್ರಸ್ತರಿಗೆ ₹10 ಲಕ್ಷ ಪರಿಹಾರ ಪಾವತಿಸುವಂತೆ ಇದೇ ನ್ಯಾಯಾಲಯದ ಮತ್ತೊಂದು ಪೀಠವು ನೀಡಿರುವ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರ ಸಂತ್ರಸ್ತ ಪರಿಹಾರ (ತಿದ್ದುಪಡಿ) ಯೋಜನೆಯ ಕಲಂ 4ರಲ್ಲಿ ಆಸಿಡ್ ದಾಳಿಗೆ ತುತ್ತಾದವರಿಗೆ ₹3-5 ಲಕ್ಷ ಪರಿಹಾರ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅದಾಗ್ಯೂ, ಈ ಪರಿಹಾರದ ಮೊತ್ತ ಚಿಕಿತ್ಸೆ ಪಡೆಯಲು ಸಾಲದು ಎಂದು ಹೇಳಿದ್ದಾರೆ ಎಂದು ರಾಜ್ಯ ಸರ್ಕಾರದ ವಕೀಲ ಅಶುತೋಷ್ ಕುಲಕರ್ಣಿ ಹೇಳಿದ್ದಾರೆ.
ಎರಡು ವಾರಗಳಲ್ಲಿ ಪ್ರತಿ ಅರ್ಜಿದಾರರಿಗೆ ಪ್ರತ್ಯೇಕವಾಗಿ ತಲಾ ₹2 ಲಕ್ಷ ಮಧ್ಯಂತರ ಪರಿಹಾರ ಪಾವತಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪೀಠವು ನಿರ್ದೇಶಿಸಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದೆ.