Bombay High Court 
ಸುದ್ದಿಗಳು

ಸರ್ಕಾರಿ ಜಾಹೀರಾತು: ಸಾರ್ವಜನಿಕ ಹಣದ ದುರುಪಯೋಗ ತಡೆಯಲು ಸಮಿತಿ ರಚನೆಗೆ ಸೂಚಿಸಿದ ಬಾಂಬೆ ಹೈಕೋರ್ಟ್

ಸರ್ಕಾರಿ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಹೊಣೆಗಾರಿಕೆ ಇರಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಆದೇಶ ಜಾರಿಗೊಳಿಸಲಾಗಿದೆ.

Bar & Bench

ಅನ್ಯ ಉದ್ದೇಶಗಳಿಗಾಗಿ ಜಾಹೀರಾತುಗಳನ್ನು ನೀಡುವುದಕ್ಕಾಗಿ ಸಾರ್ವಜನಿಕ ನಿಧಿ ದುರುಪಯೋಗವಾಗದಂತೆ ನೋಡಿಕೊಳ್ಳಲು ತ್ರಿಸದಸ್ಯ ಸಮಿತಿ ರಚಿಸುವಂತೆ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ  [ಎಡಿಟರ್ಸ್ ಫೋರಮ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಮಿತಿಯನ್ನು ಡಿಸೆಂಬರ್ 14ರೊಳಗೆ ರಚಿಸಬೇಕು ಎಂದು ಪೀಠ ನಿರ್ದೇಶಿಸಿದೆ.

ಸರ್ಕಾರಿ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಅದರಲ್ಲಿಯೂ ರಾಜಕೀಯ ಉದ್ದೇಶಗಳಿಗಾಗಿ ಸಾರ್ವಜನಿಕ ಸಂಪನ್ಮೂಲ ದುರುಪಯೋಗ ತಡೆಯಲು  ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಹೊಣೆಗಾರಿಕೆ ಇರಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಆದೇಶ ಜಾರಿಗೊಳಿಸಲಾಗಿದೆ.

ಸಮಿತಿಯು ಅಸ್ತಿತ್ವದಲ್ಲಿ ಇಲ್ಲದಿರುವ ಬಗ್ಗೆ ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಜಿತೇಂದ್ರ ಜೈನ್ ನೇತೃತ್ವದ ಪೀಠ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಮಿತಿ ಏಕೆ ಅಸ್ತಿತ್ವದಲ್ಲಿಲ್ಲ ಎಂಬ ಬಗ್ಗೆ ಸಮರ್ಥನೆ ಕೂಡ ಇಲ್ಲ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಜಾಹೀರಾತು ಪ್ರಚಾರ ನಡೆಸುವ ಮೂಲಕ ಸರ್ಕಾರ ಮತ್ತು ಅದರ ಅಂಗಗಳು ಮುಂದಾಗುವುದು ದುರುದ್ದೇಶಪೂರಿತ, ಅನಿಯಂತ್ರಿತ ಮತ್ತು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ (BMC), ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (CIDCO) ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC) ಸೇರಿದಂತೆ ವಿವಿಧ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪ ಮಾಡಿ ಪತ್ರಿಕಾ ಸಂಪಾದಕರ ವೇದಿಕೆಯಾದ ಎಡಿಟರ್ಸ್‌ ಫೋರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.

ಸಮಿತಿಯನ್ನು ಸ್ಥಾಪಿಸುವ ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನ್ಯಾಯಾಲಯ ನಿರ್ದೇಶಿಸಿತು.