Bombay High Court  
ಸುದ್ದಿಗಳು

ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ ಡಿ ಕಸಿಯುವಂತಿಲ್ಲ: ಬಾಂಬೆ ಹೈಕೋರ್ಟ್

ವ್ಯಕ್ತಿಗಳ ಹೇಳಿಕೆ ದಾಖಲಿಸಲು ಸಮಯ ನಿಗದಿಪಡಿಸುವ ಸಂಬಂಧ ಸುತ್ತೋಲೆ ಮತ್ತು ನಿರ್ದೇಶನ ಹೊರಡಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯ ಸೂಚಿಸಿದೆ.

Bar & Bench

ಆರೋಪಿಗಳ ನಿದ್ರೆಯನ್ನು ಕಸಿದುಕೊಳ್ಳುವ ರೀತಿಯಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಸಾಕ್ಷಿಗಳು ಮತ್ತು ಆರೋಪಿಗಳ ಹೇಳಿಕೆ ದಾಖಲಿಸುವುದಕ್ಕೆ ಬಾಂಬೆ ಹೈಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ [ರಾಮ್ ಇಸ್ರಾನಿ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ವಿಚಾರಣೆಗೆ ಕರೆಸಿಕೊಳ್ಳುವ ವ್ಯಕ್ತಿಗಳ ಹೇಳಿಕೆ ದಾಖಲಿಸಲು ಸಮಯ ನಿಗದಿಪಡಿಸುವ ಸಂಬಂಧ ಸುತ್ತೋಲೆ ಮತ್ತು ನಿರ್ದೇಶನ ನೀಡುವಂತೆ ಇ ಡಿಗೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ಪೀಠ ಸೂಚಿಸಿದೆ.

“ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದರಿಂದ ಖಂಡಿತವಾಗಿಯೂ ವ್ಯಕ್ತಿಯ ನಿದ್ರೆಯನ್ನು ಕಸಿದುಕೊಂಡಂತಾಗುತ್ತದೆ. ನಿದ್ರಿಸುವುದು ವ್ಯಕ್ತಿಯ ಮೂಲಭೂತ ಹಕ್ಕು. ಇ ಡಿಯ ಕಾರ್ಯವೈಖರಿಯನ್ನು ಒಪ್ಪಲಾಗದು. ಹೀಗಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್‌ 50ರ ಅಡಿಯಲ್ಲಿ ಸಮನ್ಸ್‌ ನೀಡಿದಾಗ ಹೇಳಿಕೆಗಳನ್ನು ದಾಖಲಿಸುವ ಸಮಯ ನಿಗದಿಯ ಕುರಿತಾಗಿ ಸುತ್ತೋಲೆ ಇಲ್ಲವೇ ನಿರ್ದೇಶನ ನೀಡುವಂತೆ ಇ ಡಿಗೆ ಸೂಚಿಸುವುದು ಸೂಕ್ತ” ಎಂದು ನ್ಯಾಯಾಲಯ ಹೇಳಿದೆ.

ಇ ಡಿ  ಅಧಿಕಾರಿಗಳ ತನಿಖೆಯು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿನ ತನಿಖೆಗಿಂತ ವಿಭಿನ್ನ ನೆಲೆಯಲ್ಲಿದ್ದು ಅದನ್ನು  ನ್ಯಾಯಾಂಗ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದರಿಂದ ಹೇಳಿಕೆಗಳ ದಾಖಲೀಕರಣ ಸೂಕ್ತ ಸಮಯದಲ್ಲಿ ನಡೆಯುವ ಅಗತ್ಯವಿದೆ ಎಂದು ನ್ಯಾಯಾಲಯ ನುಡಿದಿದೆ.

ಬ್ಯಾಂಕ್ ವಂಚನೆ ಪ್ರಕರಣದಲ್ಲಿ  ಇ ಡಿ ತನ್ನನ್ನು ಅಕ್ರಮವಾಗಿ ಬಂಧಿಸಿದೆ ಎಂದು ಆರೋಪಿಸಿ 64 ವರ್ಷದ ಉದ್ಯಮಿ ರಾಮ್ ಇಸ್ರಾನಿ ಅವರು ಅರ್ಜಿ ಸಲ್ಲಿಸಿದ್ದರು.

ಕಳೆದ ವರ್ಷ ಆಗಸ್ಟ್‌  7 ಮತ್ತು 8 ರಂದು ಇ ಡಿ ಕಚೇರಿಯಲ್ಲಿ ತಾನು ಕಾಯುವಂತಾಗಿತ್ತು. ತನ್ನ ಹೇಳಿಕೆಯನ್ನು ರಾತ್ರಿ 10:30ರಿಂದ ಮರುದಿನ ಮುಂಜಾನೆ 3:00ರವರೆಗೆ ದಾಖಲಿಸಿಕೊಳ್ಳಲಾಗಿತ್ತು. ಒಟ್ಟು 20 ಗಂಟೆಗಳ ಕಾಲ ತಾನು ಎಚ್ಚರವಾಗಿ ಇರುವಂತೆ ಮಾಡಲಾಗಿತ್ತು. ಆಗಸ್ಟ್ 8 ರಂದು ಬೆಳಿಗ್ಗೆ 5:30ಕ್ಕೆ ತನ್ನನ್ನು ಬಂಧಿಸಲಾಯಿತು ಎಂದು ಇಸ್ರಾನಿ ದೂರಿದ್ದರು.

ತಮ್ಮ ಬಂಧನ ಪ್ರಶ್ನಿಸಿ ಅವರು ಸಲ್ಲಿಸಿದ್ದ ಮನವಿಯಲ್ಲಿ ಅರ್ಹತೆ ಇಲ್ಲ ಎಂದು ನ್ಯಾಯಾಲಯ ತಿಳಿಸಿತಾದರೂ ಇಸ್ರಾನಿ ಅವರನ್ನು ರಾತ್ರಿಯಿಡೀ ಇರಿಸಿಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಇಸ್ರಾನಿ ಅವರ ಅರ್ಜಿಯನ್ನು ಅದು ವಜಾಗೊಳಿಸಿತು. ಆದರೆ ಹೇಳಿಕೆ ದಾಖಲೆ ಸಂಬಂಧ ಸಮಯ ನಿಗದಿ ಕುರಿತಂತೆ ತಾನು ನೀಡಿರುವ ನಿರ್ದೇಶನಗಳನ್ನು ಇ ಡಿ ಪಾಲಿಸಿದೆಯೇ ಎಂಬುದನ್ನು ದಾಖಲಿಸಿಕೊಳ್ಳಲು ಸೆಪ್ಟೆಂಬರ್ 9ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

“ ನಿದ್ರಿಸುವ ಹಕ್ಕು ಮನುಷ್ಯನ ಮೂಲಭೂತ ಹಕ್ಕಾಗಿದೆ. ನಿದ್ರಿಸುವ ಹಕ್ಕು ನೀಡಿದಿದ್ದರೆ ವ್ಯಕ್ತಿಯ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇದು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆತನ ಮಾನಸಿಕ ಸಾಮರ್ಥ್ಯ ಹಾಗೂ ಗ್ರಹಿಕೆಯ ಕೌಶಲ್ಯ ಇತ್ಯಾದಿಗಳನ್ನು ದುರ್ಬಲಗೊಳಿಸಬಹುದು. ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಕರೆಸಿಕೊಂಡು ವ್ಯಕ್ತಿಯ ಮೂಲಭೂತ ಹಕ್ಕನ್ನು ಅಂದರೆ ನಿದ್ರಿಸುವ ಹಕ್ಕನ್ನು ವಂಚಿಸುವಂತಿಲ್ಲ. ಹೇಳಿಕೆಗಳನ್ನು ಸೂಕ್ತ ಸಮಯದಲ್ಲಿಯೇ ದಾಖಿಸಿಕೊಳ್ಳಬೇಕೆ ವಿನಾ ವ್ಯಕ್ತಿಯ ಗ್ರಹಿಕೆಯ ಕೌಶಲ್ಯಗಳು ದುರ್ಬಲಗೊಂಡಿರುವ ರಾತ್ರಿ ಹೊತ್ತಿನಲ್ಲಿ ಅಲ್ಲ”  ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.