Lt. Col. Prasad Purohit, Bombay High Court
Lt. Col. Prasad Purohit, Bombay High Court  
ಸುದ್ದಿಗಳು

[ಮಾಲೆಗಾಂವ್ ಸ್ಫೋಟ] ದಾಖಲೆಯ ಮೂಲ ಕುರಿತು ಸಹಕರಿಸಲು ಆರೋಪಿ ಸೇನಾಧಿಕಾರಿ ಪುರೋಹಿತ್‌ಗೆ ಸೂಚಿಸಿದ ಬಾಂಬೆ ಹೈಕೋರ್ಟ್

Bar & Bench

ಮಾಲೆಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಕೀಲರು ಅವಲಂಬಿಸಿರುವ ದಾಖಲೆಯ ಮೂಲ ಯಾವುದು ಎಂದು ತಿಳಿಯಪಡಿಸುವಂತೆ ಪ್ರಕರಣದ ಆರೋಪಿ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಅವರಿಗೆ ಬುಧವಾರ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಸಿಆರ್‌ಪಿಸಿ ಅಡಿಯಲ್ಲಿ ಅಗತ್ಯ ಕಾರ್ಯವಿಧಾನದ ಒಪ್ಪಿಗೆ ಪಡೆಯದೆ ಎನ್ಐಎ ವಿಶೇಷ ನ್ಯಾಯಾಲಯ ಪ್ರಕರಣವನ್ನು ಪರಿಗಣಿಸಿರುವ ಸಂಬಂಧ ಪುರೋಹಿತ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಮತ್ತು ಮನೀಶ್‌ ಪಿಟಾಲೆ ಅವರಿದ್ದ ಪೀಠ ನಡೆಸಿತು. ತನ್ನ ಅಧಿಕೃತ ಕರ್ತವ್ಯದ ಭಾಗವಾಗಿ ಪುರೋಹಿತ್‌ ಹೇಗೆ ಪಿತೂರಿ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ತೋರಿಸಲು ಸೇನೆಯ ಅನೇಕ ದಾಖಲೆಗಳನ್ನು ಆರೋಪಿ ಪರ ವಕೀಲ ಶ್ರೀಕಾಂತ್‌ ಶಿವಾಡೆ ಮಂಡಿಸಿದರು.

ಸೇನಾ ಗುಪ್ತಚರ ಕರ್ತವ್ಯದ ಭಾಗವಾಗಿ 2005ರಲ್ಲಿ ತನ್ನ ಮೇಲಾಧಿಕಾರಿಗಳಿಗೆ ಪುರೋಹಿತ್‌ ಬರೆದದ್ದು ಎನ್ನಲಾದ ಪತ್ರವೊಂದನ್ನು ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ಗೌಪ್ಯತೆಯ ಕಾರಣಕ್ಕಾಗಿ ಇದರ ಪ್ರತಿಯನ್ನು ನೀಡಲು ಆಗುವುದಿಲ್ಲ ಎಂದು ಶಿವಾಡೆ ಈ ಸಂದರ್ಭದಲ್ಲಿ ಹೇಳಿದರು. ಆಗ ಮಧ್ಯ ಪ್ರವೇಶಿಸಿದ ನ್ಯಾ. ಶಿಂಧೆ ದಾಖಲೆಯ ಮೂಲದ ಬಗ್ಗೆ ವಿಚಾರಿಸಿದರು. ಅಲ್ಲದೆ ನ್ಯಾಯಾಲಯ ಇದನ್ನು ಏಕೆ ಪರಿಗಣಿಸಬೇಕು. ಇದನ್ನು ಏಕೆ ತೋರಿಸಲು ಸಾಧ್ಯವಿಲ್ಲ?” ಎಂದು ಪ್ರಶ್ನಿಸಿದರು. ಅಲ್ಲದೆ “ಪೊಲೀಸ್‌ ಅಧಿಕಾರಿಗಳು ಮೊಹರು ಮಾಡಿದ ಲಕೋಟೆಯಲ್ಲಿ ನಮಗೆ ಪತ್ರಗಳನ್ನು ಸಲ್ಲಿಸುತ್ತಾರೆ. ನಾವದನ್ನು ಓದಿ ಅವರಿಗೆ ಮರಳಿಸುತ್ತೇವೆ. ಅದನ್ನು ಗೌಪ್ಯವಾಗಿಡುವಂತೆ ನಮ್ಮನ್ನು ಕೋರಿರುತ್ತಾರೆ. ನಾವು ಅದನ್ನು ಪರಿಗಣಿಸುತ್ತೇವೆ ಏಕೆಂದರೆ ಅದು ಅಧಿಕೃತ ಮೂಲಗಳಿಂದ ಬಂದಿರುತ್ತದೆ” ಎಂದು ಉದಾಹರಣೆ ಮೂಲಕ ವಿವರಿಸಿದರು. “ತೀರ್ಪನ್ನು ಬರೆಯುವಾಗ ನಾವು ಕಂಡದ್ದೇನು ಕಾಣದೇ ಇರುವುದೇನು ಎಂಬ ಎಲ್ಲಾ ಅಂಶಗಳನ್ನು ಸೇರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.

ನ್ಯಾಯಾಲಯ ನಿರ್ದೇಶಿಸಿದರೆ ಪ್ರತಿವಾದಿಗಳಿಗೆ ದಾಖಲೆಯ ಪ್ರತಿ ನೀಡುವುದಾಗಿ ಶಿವಾಡೆ ಪ್ರತಿಕ್ರಿಯಿಸಿದರು. ಆಗ ನ್ಯಾಯಾಲಯ ಅಂತಹ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿತು. ಕಕ್ಷೀದಾರರು ಬೇರೆ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಎಂಬ ಷರತ್ತಿನ ಮೇರೆಗೆ ಕಕ್ಷೀದಾರರು ದಾಖಲೆಯನ್ನು ಸಲ್ಲಿಸಿದ್ದಾರೆ ಎಂಬುದನ್ನು ನೆನಪಿಸಿತು. ತಮ್ಮ ಮುಂದೆ ದಾಖಲೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ವಕೀಲರು ಮಾಡಿದ ಮನವಿಯನ್ನೂ ನ್ಯಾಯಾಲಯ ಬಲವಾಗಿ ತಿರಸ್ಕರಿಸಿತು. “ನಾವು ಯಾಕೆ ನೋಟಿಸ್‌ ನೀಡಬೇಕು? ಅರ್ಜಿದಾರರ ಸಮಸ್ಯೆಗಾಗಿ ಯಾರಿಗೆ ಏನೆಂದು ನೋಟಿಸ್‌ ನೋಡಬೆಕೆಂದು ನೀವು ಬಯಸುತ್ತೀರಿ?” ಎಂದು ಪ್ರಶ್ನಿಸಿತು.

“ಪುರೋಹಿತ್‌ ಅವರ ವಿರುದ್ಧ ಕೇವಲ ಪ್ರಚೋದನೆಯ ಆರೋಪ ಇದ್ದು ಅದನ್ನು ಕೂಡ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿಯ (ಎಂಸಿಒಸಿಎ) ಆ ಆರೋಪಗಳನ್ನು ಕೂಡ ಕೈಬಿಡಲಾಗಿದೆ” ಎಂದು ಪುರೋಹಿತ್‌ ಪರ ವಾದ ಮಂಡಿಸಲಾಯಿತು. ತನ್ನ ವಿರುದ್ಧ ಯಾವುದೇ ಆರೋಪ ಇಲ್ಲ ತಾನು ಅಪರಾಧಿ ಅಲ್ಲ. ಅಪರಾಧಿಗಳು ಪರಾರಿಯಾಗಿದ್ದಾರೆ. ತನ್ನ ವಿರುದ್ಧದ ಆರೋಪ ಎಂದರೆ ಪ್ರಚೋದನೆ ನೀಡಿರುವುದು, ಅದೂ ಸಾಮಾನ್ಯ ಪ್ರಚೋದನೆಯಾಗಿದ್ದು ನಾನು ಸಭೆಗಳಿಗೆ ಹಾಜರಾಗಿದ್ದೆ. ಸಭೆಯಲ್ಲಿ ಹೆಚ್ಚು ಮಾತನಾಡಿದ ವ್ಯಕ್ತಿಯೇ ಸಾಕ್ಷಿ. (2008ರ) ಜನವರಿಯಲ್ಲಿ ನಡೆದ ಸಭೆಯಲ್ಲಿ ಸ್ಫೋಟದ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ” ಎಂದು ವಿವರಿಸಲಾಯಿತು.

2009ರಲ್ಲಿ ಪುರೋಹಿತ್‌ಗೆ ದಾಖಲೆಗಳು ಇರುವ ಬಗ್ಗೆ ತಿಳಿಯಿತು ಎಂದಾಗ ನ್ಯಾ. ಪಿಟಾಲೆ ಅವರು “ಆಕ್ಷೇಪಣೆ ಸಲ್ಲಿಸಲು ಇಷ್ಟು ದಿನ ಏಕೆ ಕಾಯುತ್ತಿದ್ದಿರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಾಡೆ “ಆರೋಪಗಳನ್ನು ನಿಗದಿಪಡಿಸುವವರೆಗೆ ಕಾಯುವಂತೆ ವಿಶೇಷ ನ್ಯಾಯಾಲಯ ಹೇಳಿತು. 2018ರಲ್ಲಿಯಷ್ಟೇ ಆರೋಪಗಳನ್ನು ನಿಗದಿಪಡಿಸಿತು” ಎಂದರು. ಆಗ ಯಾರಾದರೂ ಸೇನಾ ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದರೆ ಎಂಬುದನ್ನು ನ್ಯಾಯಾಲಯ ವಿಚಾರಿಸಿತು. ಪುರೋಹಿತ್‌ ಈ ಹಿಂದೆಯೂ ಅನೇಕ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದ್ದರು ಎಂದು ವಕೀಲ ಶಿವಾಡೆ ದೃಢವಾಗಿ ಪ್ರತಿಕ್ರಿಯಿಸಿದಾಗ ನ್ಯಾ. ಶಿಂಧೆ ಅವರು “ತನ್ನ ಕೆಲಸದ ಬಗ್ಗೆ ತಿಳಿದಿದ್ದರೂ ಕೂಡ ಪುರೋಹಿತ್‌ ವಿರುದ್ಧ ಸೇನೆ ಕ್ರಮ ಕೈಗೊಂಡಿದ್ದು ಏಕೆ?” ಎಂದು ಪ್ರಶ್ನಿಸಿದರು. “ಬಂಧನ ವಾರೆಂಟ್‌ ನಕಲು ಮಾಡಿದ ಆರೋಪದ ಬಳಿಕ 2008ರಲ್ಲಿ ಪುರೋಹಿತ್ ಅವರನ್ನು ಮೇಲಾಧಿಕಾರಿ ಭಯೋತ್ಪಾದನಾ ನಿಗ್ರಹ ದಳಕ್ಕೆ ಹಸ್ತಾಂತರಿಸಿದ್ದರು” ಎಂದು ವಾದಿಸಿದರು.

ಇದನ್ನು ಸಂಫೂರ್ಣ ಒಪ್ಪದ ನ್ಯಾಯಾಲಯ “ದೇಶದ ಆಂತರಿಕ ವಿಚಾರಗಳಲ್ಲಿ ರೂಢಿಯಂತೆ ಮಧ್ಯಪ್ರವೇಶಿಸಲು ನಿರಾಕರಿಸುವ ಸೇನೆ ಹಸ್ತಕ್ಷೇಪ ಮಾಡಿದ್ದು ಏಕೆ?” ಎಂದು ಪ್ರಶ್ನಿಸಿತು. “ನಿರ್ದಿಷ್ಟ ಆದೇಶಗಳ ವಿನಾ ಸಶಸ್ತ್ರ ಪಡೆಗಳು ದೇಶದ ಆಂತರಿಕ ವಿಷಯಗಳಲ್ಲಿ ಭಾಗಿಯಾಗುವುದಿಲ್ಲ. ತಾವು ಗಡಿಯಲ್ಲಿ ಹೋರಾಡುತ್ತೇವೆ, ನಾಗರಿಕರೊಂದಿಗೆ ಅಲ್ಲ ಎಂಬುದಾಗಿ ಅವು ಹೇಳುತ್ತವೆ" ಎಂದು ನ್ಯಾ. ಶಿಂಧೆ ಹೇಳಿದರು. ಆಗ ನ್ಯಾ. ಪಿಟಾಲೆ, “ಮಾವೋವಾದಿಗಳ ವಿರುದ್ಧ ವಿಮಾನಗಳನ್ನು ಬಳಸಲು ವಾಯುಪಡೆ ಮುಖ್ಯಸ್ಥರು ನಿರಾಕರಿಸಿದ್ದರು ಎಂಬುದು ನಿಮಗೆ ನೆನಪಿರಬಹುದು. ಅವರು ಒಮ್ಮೆ ಮಧ್ಯಪ್ರವೇಶಿಸಿದರೆ ಉಳಿದುದೆಲ್ಲಕ್ಕೂ ಹಾನಿಯಾಗುತ್ತದೆ” ಎಂದರು. ಆಗ ಶಿವಾಡೆ “ಇದು ಅಂತಹ ಪ್ರಕರಣವಲ್ಲ. ಸಂಘಟನೆಯಲ್ಲಿ ತೂರಿಕೊಳ್ಳಲು ಸೇನಾ ಗುಪ್ತಚರ ಸಹಾಯ ಮಾಡಿತ್ತು” ಎಂದರು.

2005ರ ಸೆಪ್ಟೆಂಬರ್ 13ರಂದು ತನ್ನ ಉನ್ನತ ಅಧಿಕಾರಿಗಳಿಗೆ ಬರೆದ ಪತ್ರದೊಂದಿಗೆ ಈ ವಾದ ದೃಢೀಕರಿಸಲು ಶಿವಾಡೆ ಅವರು ಮುಂದಾದರು. ಆಗ ನ್ಯಾಯಾಲಯ ತನ್ನ ಕಕ್ಷೀದಾರರೊಂದಿಗೆ ಸಮಾಲೋಚಿಸಿ ಅಧಿಕೃತ ಮೂಲದ ಮೂಲಕ ದಾಖಲೆ ಸಲ್ಲಿಸುವಂತೆ ಸೂಚಿಸಿತು. ದಾಖಲೆ ಕುರಿತು ನಿಲುವು ಸ್ಪಷ್ಟಪಡಿಸಲು ಪುರೋಹಿತ್‌ ಅವರಿಗೆ ಸಮಯಾವಕಾಶ ನೀಡಿದ ನ್ಯಾಯಾಲಯ ಪ್ರಕರಣವನ್ನು ಮುಂದಿನ ವಾರಕ್ಕೆ ನಿಗದಿಪಡಿಸಿತು.