ಜಾಮೀನು ಅರ್ಜಿಗಳನ್ನು ನಿರ್ಧರಿಸಲು ಕೇವಲ ರಬ್ಬರ್ ಸ್ಟ್ಯಾಂಪ್ ಬಳಸುವುದನ್ನು ನಿಲ್ಲಿಸಿ ಕಾರಣ ಉಲ್ಲೇಸುವ ಆದೇಶಗಳನ್ನು (ಸ್ಪೀಕಿಂಗ್ ಆರ್ಡರ್) ನೀಡಬೇಕು ಎಂದು ಮಹಾರಾಷ್ಟ್ರದ ಎಲ್ಲಾ ಅಧೀನ ನ್ಯಾಯಾಲಯಗಳು/ ಮ್ಯಾಜಿಸ್ಟ್ರೇಟ್‌ಗಳಿಗೆ ಬಾಂಬೆ ಹೈಕೋರ್ಟ್ ನಾಗಪುರ ಪೀಠ ಇತ್ತೀಚೆಗೆ ಸೂಚಿಸಿದೆ. [ಅಶೋಕ್ ರಾವ್ ಪವಾರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಮ್ಯಾಜಿಸ್ಟ್ರೇಟ್ ಒಬ್ಬರು ನೀಡಿದ್ದ ಜಾಮೀನು ಆದೇಶ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ ʼಖಾಲಿ ಜಾಗದಲ್ಲಿ ಕೇವಲ ಬಾಂಡ್ ಮೊತ್ತ ವಿವರಿಸಿ .ರಬ್ಬರ್ ಸ್ಟಾಂಪ್ ಒತ್ತಿ ಆದೇಶ ರವಾನಿಸಲಾಗಿದೆ, ಬೇರೆ ವಿವರಗಳನ್ನು ತಿಳಿಸಿಲ್ಲʼ ಎಂದಿತು.
“ಜಾಮೀನು ಮಂಜೂರಾತಿ ಎಂಬುದು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಚಲಾಯಿಸಬೇಕಾದ ವಿವೇಚನಾಧಿಕಾರವಾಗಿದ್ದು ದಾಖಲೆಯಲ್ಲಿರುವ ಸಂಗತಿಗಳನ್ನು ಪರಿಗಣಿಸಿದ ನಂತರ ತಮ್ಮ ವಿವೇಚನೆ ಬಳಸಿ ವಿವರವಾದ ಆದೇಶ ಉಲೇಖಿಸಿ ಜಾಮೀನು ನೀಡುತ್ತಾರೆ ಇಲ್ಲವೇ ತಿರಸ್ಕರಿಸುತ್ತಾರೆ ಎಂಬ ನಿರೀಕ್ಷೆ ಇದೆ. ಜಾಮೀನು ಮಂಜೂರಾತಿಗೆ ಯಾವುದೇ ಕಾರಣಗಳನ್ನು ಉಲ್ಲೇಖಿಸದೆ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶದ ಮೇಲೆ ಕೇವಲ ರಬ್ಬರ್ ಸ್ಟಾಂಪ್‌ನಿಂದ ಅಚ್ಚೊತ್ತಿ ರವಾನಿಸುವಂತಿಲ್ಲ” ಎಂದು ಅದು ವಿವರಿಸಿದೆ.
ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್‌ಎ ಮೆನೇಜಸ್ ಅವರಿದ್ದ ವಿಭಾಗೀಯ ಪೀಠ ಜಾಮೀನು ನೀಡಲು ರಬ್ಬರ್ ಸ್ಟ್ಯಾಂಪ್ ಬಳಕೆಗೆ ಹೈಕೋರ್ಟ್ ಯಾವುದೇ ಸ್ಪಷ್ಟ ಅಧಿಕಾರ ನೀಡಿಲ್ಲ ಎಂದು ಕೂಡ ಹೇಳಿತು. ಹೀಗಾಗಿ ಜಾಮೀನು ಅರ್ಜಿಗಳನ್ನು ನಿರ್ಧರಿಸುವಾಗ ರಬ್ಬರ್ ಸ್ಟಾಂಪ್ ಬಳಕೆ ಮಾಡದಂತೆ ಅಧೀನ ನ್ಯಾಯಾಲಯಗಳು/ ಮ್ಯಾಜಿಸ್ಟ್ರೇಟ್‌ಗಳಿಗೆ ನ್ಯಾಯಾಲಯ ನಿರ್ದೇಶಿಸಿತು.
ಮಹಾರಾಷ್ಟ್ರ ಕೊಳೆಗೇರಿ ನಾಯಕರು, ಕಾಳದಂಧೆಕೋರರು, ಮಾದಕವಸ್ತು ಅಪರಾಧಿಗ:ಳು ಹಾಗೂ ಅಪಾಯಕಾರಿ ವ್ಯಕ್ತಿಗಳ ಚಟುವಟಿಕೆ ನಿಯಂತ್ರಣ ಕಾಯಿದೆ ಹಾಗೂ ವೀಡಿಯೊ ಪೈರೇಟ್ ಕಾಯಿದೆಯಡಿ ತನ್ನ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆ ಪ್ರಶ್ನಿಸಿ ಅಶೋಕ್ ರಾವ್ ಪವಾರ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿತು.
ಅಲ್ಲದೆ ತಪ್ಪು ಸಾಕ್ಷ್ಯಗಳ ಆಧಾರದ ಮೇಲೆ ಆದೇಶ ರವಾನಿಸಲಾಗಿದ್ದು ಇದು ಸಮರ್ಥನೀಯವಲ್ಲ ಎಂದ ಪೀಠ ಪವಾರ್ ವಿರುದ್ಧ ಹೊರಡಿಸಲಾಗಿದ್ದ ಗಡಿಪಾರು ಆದೇಶ ರದ್ದುಗೊಳಿಸಿ ಉಳಿದ ಪ್ರಕರಣಗಳಲ್ಲಿ ಆತನ ಬಂಧನ ಅಗತ್ಯವಿಲ್ಲದಿದ್ದರೆ ಬಿಡುಗಡೆ ಮಾಡುವಂತೆ ಆದೇಶಿಸಿತು.