High Court of Bombay
High Court of Bombay 
ಸುದ್ದಿಗಳು

ಸುಶಾಂತ್‌ ಸಿಂಗ್ ಸಾವಿನ ಪ್ರಕರಣ: ಮೀತು ಸಿಂಗ್‌ ವಿರುದ್ಧದ ಪ್ರಕರಣ ವಜಾ, ಪ್ರಿಯಾಂಕಾ ಸಿಂಗ್‌ ವಿರುದ್ಧ ತನಿಖೆ ಅಬಾಧಿತ

Bar & Bench

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಹೋದರಿ ಮೀತು ಸಿಂಗ್‌ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಅನ್ನು ಬಾಂಬೆ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ಸುಶಾಂತ್‌ ಮತ್ತೊಬ್ಬ ಸಹೋದರಿ ಪ್ರಿಯಾಂಕಾ ಸಿಂಗ್‌ ಮತ್ತು ಡಾ. ತರುಣ್‌ ಕುಮಾರ್‌ ಅವರ ವಿರುದ್ಧ ವಿಚಾರಣೆ ಅಬಾಧಿತವಾಗಿ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ಣಿಕ್‌ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ಜನವರಿ 7ರಂದು ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

“ಪ್ರಿಯಾಂಕಾ ಸಿಂಗ್‌ ವಿರುದ್ಧದ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿರುವಂತೆ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ತನಿಖೆಯು ಅಬಾಧಿತವಾಗಿ ಮುಂದುವರಿಯಲಿದೆ” ಎಂದು ನ್ಯಾಯಾಲಯ ಹೇಳಿದೆ.

“ಸುಶಾಂತ್‌ ಮುಖವನ್ನು ನೋಡಿದರೆ ಅವರು ಮುಗ್ಧ ಮತ್ತು ಗಂಭೀರ ಸ್ವಭಾವದವರು ಹಾಗೂ ಉತ್ತಮ ಮನುಷ್ಯ ಎಂದೆನಿಸುತ್ತದೆ. ಎಂ ಎಸ್‌ ಧೋನಿ ಆತ್ಮಕತೆ ಆಧಾರಿತ ಸಿನಿಮಾದಲ್ಲಿ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದರು” ಎಂದು ಹಿಂದಿನ ವಿಚಾರಣೆ ವೇಳೆ ತೀರ್ಪು ಕಾಯ್ದಿರಿಸುವ ಸಂದರ್ಭದಲ್ಲಿ ಪೀಠವು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸುಶಾಂತ್‌ಗೆ ನಿಷೇಧಿತ ಔಷಧಿ ನೀಡುವ ಉದ್ದೇಶದಿಂದ ಡಾ. ತರುಣ್‌ ಕುಮಾರ್‌ ಅವರಿಂದ ಸುಶಾಂತ್‌ ಸಹೋದರಿಯರಾದ ಮೀತು ಮತ್ತು ಪ್ರಿಯಂಕಾ ಸಿಂಗ್‌ ಅವರು ತಪ್ಪಾದ ಔಷಧಿ ಚೀಟಿ ಪಡೆದುಕೊಳ್ಳುವ ಪಿತೂರಿ ನಡೆಸಿದ್ದರು ಎಂದು ನಟಿ ರಿಯಾ ಚಕ್ರವರ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಟನ ಸಹೋದರಿಯರು ಮತ್ತು ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಇದನ್ನು ಅಲ್ಲಗಳೆದಿದ್ದ ಸುಶಾಂತ್‌ ಸಹೋದರಿಯರು, ಸುಪ್ರೀಂ ಕೋರ್ಟ್‌ ಮತ್ತು ಮಾಧ್ಯಮಗಳ ಮುಂದೆ ಆರೋಪಿ ರಿಯಾ ಚಕ್ರವರ್ತಿ ನೀಡಿದ್ದ ಹೇಳಿಕೆಗೆ ಭಿನ್ನವಾದ ಮತ್ತು ಹೊಸ ಕಟ್ಟುಕತೆ ಸೃಷ್ಟಿಸುವ ದೃಷ್ಟಿಯಿಂದ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸುಶಾಂತ್‌ ಸಹೋದರಿಯರು ಎಫ್‌ಐಆರ್‌ ಅನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಲ್ಲದೇ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರು ದುರುದ್ದೇಶಪೂರಿತವಾಗಿ ವರ್ತಿಸುತ್ತಿದ್ದು, ಅವರ ವಿರುದ್ಧ ತನಿಖೆ ನಡೆಸುವುದರ ಜೊತೆಗೆ ಸಾರ್ವಜನಿಕ ಕಾನೂನಿನ ಅಡಿ ತಮಗಾಗಿರುವ ನಷ್ಟ ತುಂಬಿಕೊಡಬೇಕು ಎಂದು ಕೋರಿದ್ದರು.

ತೊಂಬತ್ತೊಂದು ದಿನ ತಡವಾಗಿ ಎಫ್‌ಐಆರ್‌ ದಾಖಲಿಸಲಾಗಿರುವುದಕ್ಕೆ ರಿಯಾ ಚಕ್ರವರ್ತಿ ಅವರು ಸಕಾರಣ ನೀಡಿಲ್ಲ ಎಂದು ಸುಶಾಂತ್‌ ಸಹೋದರಿಯರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ವಿಕಾಸ್‌ ಸಿಂಗ್‌ ವಾದಿಸಿದ್ದರು. ಟೆಲಿಮೆಡಿಸಿನ್‌ ಪ್ರಾಕ್ಟೀಸ್‌ ಮಾರ್ಗಸೂಚಿಗಳ ಅನ್ವಯ ಮೊದಲ ಸಮಾಲೋಚನೆಯಲ್ಲಿ ಔಷಧ ಸಲಹೆ ಮಾಡಲಾಗುತ್ತದೆ. ನಿಷೇಧಿತ ಔಷಧ ಸಲಹೆ ಮಾಡಲಾಗಿದೆ ಎಂಬ ಆರೋಪವು ಆಧಾರರಹಿತ ಎಂದು ಆರೋಪವನ್ನು ನಿರಾಕರಿಸಿದ್ದರು. ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾವಣೆ ಮಾಡಿದ್ದರೆ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸುವ ಅಗತ್ಯವೇ ಬೀಳುತ್ತಿರಲಿಲ್ಲ ಎಂದೂ ವಾದಿಸಿದ್ದರು.

ಸುಶಾಂತ್‌ಗೆ ಸಲಹೆ ಮಾಡಲಾದ ಔಷಧಿಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳನ್ನು ಮುಂಬೈ ಪೊಲೀಸರಿಗೆ ಸಲ್ಲಿಸಲಾಗಿತ್ತು. ಈ ಔಷಧಿಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರಿಂದ ತನಿಖೆ ನಡೆಸಲಾಗಿತ್ತು ಎಂದು ಮುಂಬೈ ಪೊಲೀಸ್‌ ಪರ ಹಿರಿಯ ವಕೀಲ ದೇವದತ್ ಕಾಮತ್‌ ಹೇಳಿದ್ದರು. ಆನ್‌ಲೈನ್‌ ಸಮಾಲೋಚನೆ ನಡೆಸದೆ ಔಷಧ ನೀಡಿರುವ ಬಗ್ಗೆ ಮತ್ತು ಎನ್‌ಡಿಪಿಎಸ್‌ ಕಾಯಿದೆಯಲ್ಲಿ ಉಲ್ಲೇಖಿತವಾಗಿರುವ ಮಾದಕ ಪದಾರ್ಥಗಳನ್ನು ಸಹ ಔಷಧವಾಗಿ ನೀಡಿರುವ ಬಗ್ಗೆ ಸಾಕ್ಷ್ಯ, ವಾಟ್ಸಾಪ್‌ ಚಾಟ್‌ಗಳನ್ನು ರಿಯಾ ಚಕ್ರವರ್ತಿ ಸಲ್ಲಿಸಿದ್ದರು ಎಂದು ಕಾಮತ್‌ ನ್ಯಾಯಾಲಯದ ಗಮನಕ್ಕೆ ತಂದರು.

ಸುಶಾಂತ್‌ಗೆ ಸಲಹೆ ಮಾಡಲಾದ ಔಷಧಿ ವಿವರವು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಮೇಲಿನ ಔಷಧೀಯ ಸಲಹೆಯ ಮೇರೆಗೆ ಮಾದಕ ಪದಾರ್ಥಗಳನ್ನು ಪಡೆಯಲಾಗಿದೆ ಎನ್ನುವುದು ರಿಯಾಗೆ ಅರ್ಥವಾಯಿತು. ಸುಶಾಂತ್‌ ಸಾವಿಗೆ ಅದೇ ಔಷಧ ಕಾರಣವಿರಬಹುದು ಎಂದು ತಿಳಿದು ರಿಯಾ ಚಕ್ರವರ್ತಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು ಎಂದು ಎಫ್‌ಐಆರ್ ತಡವಾಗಿ ದಾಖಲಾಗಿರುವುದಕ್ಕೆ ಕಾರಣವನ್ನು‌ ವಕೀಲ ಸತೀಶ್‌ ಮಾನೆಶಿಂಧೆ ನ್ಯಾಯಾಲಯದ ಮುಂದಿಟ್ಟಿದ್ದರು. ಸಿಬಿಐನಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಾಗದ ಕಾರಣಕ್ಕೆ ರಿಯಾ ಚಕ್ರವರ್ತಿ ಅವರು ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು ಎಂದೂ ಮಾನೆಶಿಂಧೆ ನ್ಯಾಯಾಲಯಕ್ಕೆ ತಿಳಿಸಿದ್ದರು.