Triple talaq
Image for representative purpose
Triple talaq Image for representative purpose 
ಸುದ್ದಿಗಳು

ಎಸ್ಎಂಎಸ್ ಮೂಲಕ ತ್ರಿವಳಿ ತಲಾಖ್: ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

Bar & Bench

ಎಸ್ಎಂಎಸ್ ಸಂದೇಶದ ಮೂಲಕ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ ಆರೋಪಿಗೆ ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಜೋಡಿಯು 2015ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದು, ಅವರಿಗೆ ಒಂದು ಮಗು ಇದೆ. ಪತಿ, ಅತ್ತೆ ಹಾಗೂ ಮಾವ ₹ 10 ಲಕ್ಷದಷ್ಟು ಹಣಕ್ಕಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರು ಸಲ್ಲಿಸಿದ್ದ ಪತ್ನಿ ತಿಳಿಸಿದ್ದರು.

ಕೀಟ ನಿಯಂತ್ರಣದ ಕಾರಣಕ್ಕಾಗಿ ತನ್ನ ಹೆತ್ತವರ ಮನೆಗೆ ಹೋಗುವಂತೆ ದೂರುದಾರೆಗೆ ತಿಳಿಸಲಾಯಿತು. ಹಾಗೆ ಆಕೆ ತನ್ನ ತವರು ಮನೆಗೆ ಹೋದ ಐದು ದಿನಗಳ ನಂತರ ಪತಿಯು ಆಕೆಗೆ ತ್ರಿವಳಿ ತಲಾಖ್ ಒಳಗೊಂಡ ಎಸ್ಎಂಎಸ್ ಸಂದೇಶ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 498 ಎ (ಕ್ರೌರ್ಯ) ಮತ್ತು ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕುಗಳ ರಕ್ಷಣೆ) ಕಾಯಿದೆಯ ಸೆಕ್ಷನ್ 4 (ತ್ವರಿತ ತ್ರಿವಳಿ ತಲಾಖ್‌ಗೆ ಶಿಕ್ಷೆ) ಅಡಿಯಲ್ಲಿ ಪತ್ನಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು ಅವರಿಗೆ ಜುಲೈ 29, 2017 ರಂದು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಆ ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಗಂಡ ಪತ್ನಿಯ ಆಭರಣಗಳನ್ನು ತನ್ನ ಬಳಿ ಇರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿವರವಾದ ತನಿಖೆ ಅಗತ್ಯವಾಗಿತ್ತು. ಇದು ಕೆಳ ಹಂತದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸುವುದಕ್ಕೆ ಏಕೈಕ ಆಧಾರವಾಗಿತ್ತು ಎಂದು ನ್ಯಾಯಮೂರ್ತಿ ಸಂದೀಪ್ ಶಿಂಧೆ ಅಭಿಪ್ರಾಯಪಟ್ಟರು.

ಪತಿಯ ವಿರುದ್ಧದ ಹಣದ ಕಿರುಕುಳಕ್ಕೆ ಸಂಬಂಧಿಸಿದ ಆರೋಪಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಬಹುದಾಗಿದ್ದು ರಾಜಿಗೆ ಮುಂದಾಗುವಂತೆ ನ್ಯಾಯಾಲಯ ದಂಪತಿಯನ್ನು ಕೇಳಿತು. ದೂರುದಾರೆ ಪರ ವಕೀಲೆ ಯೋಗಿತಾ ಜೋಶಿ ಅವರು ತಮ್ಮ ಕಕ್ಷೀದಾರರಿಂದ ಸೂಚನೆಗಳನ್ನು ಪಡೆಯಲು ಸಮಯಾವಕಾಶ ಕೋರಿದಾಗ ಅದಕ್ಕೆ ನ್ಯಾಯಾಲಯ ಸಮ್ಮತಿಸಿತು. ಇದೇ ವೇಳೆ ಪತಿಗೆ ಪೀಠ ನಿರೀಕ್ಷಣಾ ಜಾಮೀನು ನೀಡಿತು.