ಹೊಟೇಲ್ ಉದ್ಯಮಿ ಜಯ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರಾಜೇಂದ್ರ ಸದಾಶಿವ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್‌ಗೆ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಮಾನತಿನಲ್ಲಿರಿಸಿದೆ.
ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಎಂಸಿಒಸಿಎ) ಅಡಿಯಲ್ಲಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಕಳೆದ ಮೇನಲ್ಲಿ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಶಿಕ್ಷೆಯ ವಿರುದ್ಧ ಛೋಟಾ ರಾಜನ್ ಸಲ್ಲಿಸಿದ್ದ ಮೇಲ್ಮನವಿ ಬಾಕಿ ಇದ್ದು, ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರಿದ್ದ ಪೀಠವು ಒಂದು ಅಥವಾ ಹೆಚ್ಚಿನ ಶ್ಯೂರಿಟಿಗಳೊಂದಿಗೆ ₹ 1 ಲಕ್ಷ ಬಾಂಡ್ ಪಡೆದು ಜಾಮೀನು ನೀಡಲು ಆದೇಶಿಸಿತು.
ಪ್ರಸ್ತುತ ಪ್ರಕರಣದಲ್ಲಿ ಜಾಮೀನು ದೊರೆತರೂ ಛೋಟಾ ರಾಜನ್‌ಗೆ ಸದ್ಯ ಬಿಡುಗಡೆ ಸಾಧ್ಯವಿಲ್ಲ. ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್ ಸೆರೆವಾಸ ಮುಂದುವರೆಯಲಿದೆ.
ದಕ್ಷಿಣಮುಂಬೈನ 'ಗೋಲ್ಡನ್ ಕ್ರೌನ್' ಹೋಟೆಲ್‌ಮಾಲೀಕರಾಗಿದ್ದ ಶೆಟ್ಟಿ ಅವರಿಗೆ ರಾಜನ್ ತಂಡದಿಂದ ಸುಲಿಗೆ ಬೆದರಿಕೆ ಎದುರಾಗಿತ್ತು. ಉದ್ಯಮಿಗೆ ಭದ್ರತೆ ಒದಗಿಸಲಾಗಿತ್ತಾದರೂ ಅವರ ಹತ್ಯೆಗೆ ಎರಡು ತಿಂಗಳ ಮೊದಲು ಭದ್ರತೆ ಹಿಂಪಡೆಯಲಾಗಿತ್ತು. ಹಣ ಪಾವತಿಸದ ಹಿನ್ನೆಲೆಯಲ್ಲಿ ಅವರನ್ನು ಅವರ ಕಚೇರಿಯ ಹೊರಭಾಗದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.