Rahul Gandhi and Bombay High Court  
ಸುದ್ದಿಗಳು

ಆರ್‌ಎಸ್‌ಎಸ್‌ ಕುರಿತ ಮಾನಹಾನಿಕರ ಹೇಳಿಕೆ ಪ್ರಕರಣ: ಬಾಂಬೆ ಹೈಕೋರ್ಟ್‌ ಆದೇಶದಿಂದ ರಾಹುಲ್‌ ನಿರಾಳ

Bar & Bench

ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತರೊಬ್ಬರು ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಕೆಲವು ಹೆಚ್ಚುವರಿ ದಾಖಲೆಗಳ ಸಲ್ಲಿಕೆಗೆ ಅನುಮತಿಸಿದ್ದ ಭಿವಂಡಿ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರ ಮತ್ತು ಆರೆಸ್ಸೆಸ್].

ನ್ಯಾಯಮೂರ್ತಿ ಪೃಥ್ವಿರಾಜ್ ಕೆ ಚವಾಣ್ ಅವರು ಆರ್‌ಎಸ್‌ಎಸ್ ಕಾರ್ಯಾಧ್ಯಕ್ಷ ರಾಜೇಶ್ ಕುಂಟೆಗೆ ಕೆಲವು ದಾಖಲೆಗಳನ್ನು ತಡವಾಗಿ ಸಲ್ಲಿಸಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿದೆ ಎಂದು ಆಕ್ಷೇಪಿಸಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದ್ದಾರೆ.

ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣದಲ್ಲಿ ದೂರುದಾರರಾಗಿರುವ ಕುಂಟೆ ಅವರುವ ವಿಳಂಬವಾಗಿ ಸಲ್ಲಿಸಿದ್ದ ಕೆಲ ಹೆಚ್ಚುವರಿ ದಾಖಲೆಗಳನ್ನು ಥಾಣೆಯ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೂನ್ 3 ರಂದು ಸ್ವೀಕರಿಸಿತ್ತು. ಮೊಕದ್ದಮೆ ದಾಖಲಿಸಲು ಕಾರಣವಾದ ಆಪಾದಿತ ಅವಹೇಳನಕಾರಿ ಭಾಷಣದ ಭಾಷಾಂತರ ಪ್ರತಿಯನ್ನು ಸಾಕ್ಷ್ಯವಾಗಿ ಪರಿಗಣಿಸಲು ನ್ಯಾಯಾಲಯವು ಅನುಮತಿಸಿತ್ತು.

ಆದರೆ, ಇದೇ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕುಂಟೆ ಅವರು ಸಲ್ಲಿಸಿರುವ ಮತ್ತೊಂದು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ನ ಎಕಸದಸ್ಯ ಪೀಠವು ನೀಡಿದ್ದ ಆದೇಶವನ್ನು ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶವು ಉಲ್ಲಂಘಿಸಿದೆ ಎಂದು ರಾಹುಲ್‌ ಗಾಂಧಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮಾನಹಾನಿಕರ ಭಾಷಣ ಮಾಡಿರುವುದನ್ನು ರಾಹುಲ್‌ ಗಾಂಧಿ ಒಂದೋ ಒಪ್ಪಿಕೊಳ್ಳ ಬೇಕು ಇಲ್ಲವೇ ನಿರಾಕರಿಸಬೇಕು ಎಂದು ಕುಂಟೆ ಅವರು ಬಾಂಬೆ ಹೈಕೋರ್ಟ್‌ ಮುಂದೆ ಮಾಡಿದ್ದ ಮನವಿಯನ್ನು 2021ರಲ್ಲಿ, ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಅವರ ಏಕಸದಸ್ಯ ಪೀಠವು ವಜಾಗೊಳಿಸಿತ್ತು. ಆಪಾದಿತ ವ್ಯಕ್ತಿಯನ್ನು ಸದರಿ ಅರ್ಜಿಯ ಅನುಬಂಧಗಳನ್ನು ಒಪ್ಪಿಕೊಳ್ಳಲು ಅಥವಾ ನಿರಾಕರಿಸಲು ಒತ್ತಾಯಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಡೇರೆ ಈ ವೇಳೆ ವಿವರಿಸಿದ್ದರು.

2021 ರ ಹೈಕೋರ್ಟ್‌ನ ಆದೇಶದ ಹೊರತಾಗಿಯೂ, ಮ್ಯಾಜಿಸ್ಟ್ರೇಟ್ ಅವರು ದಾಖಲೆಗಳನ್ನು ಒಪ್ಪಿಕೊಳ್ಳಲು ಅಥವಾ ನಿರಾಕರಿಸಲು ಗಾಂಧಿಯನ್ನು ಒತ್ತಾಯಿಸುವ ಅದೇ ದಾಖಲೆಗಳನ್ನು ಪರಿಗಣಿಸಿದ್ದಾರೆ ಎಂದು ಗಾಂಧಿ ಅವರು ಪ್ರಸ್ತುತ ಅರ್ಜಿಯಲ್ಲಿ ಹೇಳಿದ್ದರು.

ಹಿನ್ನೆಲೆ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಗೆ ಹಿಂದೂ ಸಂಘಟನೆ ಆರೆಸ್ಸೆಸ್ ಕಾರಣವೆಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ ಎಂದು ಕುಂಟೆ ಅವರು ರಾಹುಲ್‌ ಗಾಂಧಿ ವಿರುದ್ಧ 2014ರಲ್ಲಿ ಮಾನಹಾನಿ ಮೊಕದ್ದಮೆಯನ್ನು ಭಿವಂಡಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದರು.

ದೂರನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಚಾರಣೆಗೆ ಹಾಜರಾಗಲು ಗಾಂಧಿಗೆ ಸಮನ್ಸ್‌ ನೀಡಿತ್ತು. ಇದನ್ನು ರದ್ದುಪಡಿಸಲು ಕೋರಿ ರಾಹುಲ್‌ ಗಾಂಧಿ 2014 ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಅವರು ಕೋರಿದ್ದರು. ಇದೇ ವೇಳೆ ಅವರು ತಮ್ಮ ಅರ್ಜಿಯಲ್ಲಿ ಅವಹೇಳನಕಾರಿ ಎನ್ನಲಾದ ತಮ್ಮ ಭಾಷಣದ ಪ್ರತಿಯನ್ನು ಲಗತ್ತಿಸಿದ್ದರು.

ಗಾಂಧಿಯವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆದರೆ, ಇತ್ತ ಕುಂಟೆ ಅವರು ಮ್ಯಾಜಿಸ್ಟ್ರೇಟ್ ಮುಂದೆ ರಾಹುಲ್‌ ಗಾಂಧಿಯವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಮ್ಮ ಭಾಷಣದ ಪ್ರತಿಯನ್ನು ಸೇರಿಸುವ ಮೂಲಕ ನಿಸ್ಸಂದಿಗ್ಧವಾಗಿ ಭಾಷಣವನ್ನು ತಾನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವಾದಿಸಿದ್ದರು. ಆದಾಗ್ಯೂ, ಕುಂಟೆ ಅವರ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಿರಸ್ಕರಿಸಿತ್ತು. ಹೈಕೋರ್ಟ್‌ನಲ್ಲಿ ಇದನ್ನು ಕುಂಟೆ ಪ್ರಶ್ನಿಸಿದ್ದರು.

ಈ ಅರ್ಜಿಯನ್ನು 2021 ರಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು. ರಾಹುಲ್‌ ಗಾಂಧಿಯವರು ತಮ್ಮ ಮನವಿಯಲ್ಲಿ ಕುಂಟೆಯವರ ನೀಡಿದ್ದ ದಾಖಲೆಯನ್ನು ಅನುಬಂಧದಲ್ಲಿ ಸೇರಿಸಿದ್ದರು ಎಂದ ಮಾತ್ರಕ್ಕೆ ಅದು ಸಾರ್ವಜನಿಕ ದಾಖಲೆಯಾಗುವುದಿಲ್ಲ ಎಂದು ಈ ವೇಳೆ ಹೈಕೋರ್ಟ್‌ ತಿಳಿಸಿತ್ತು. ಅಲ್ಲದೆ, ಆ ದಾಖಲೆಯನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ಕುಂಟೆಗೆ ಅನುಮತಿಸಿತ್ತು.

ಈ ಅದೇಶದ ಹೊರತಾಗಿಯೂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಕುಂಟೆ ಅವರು ತನ್ನ ಮುಂದೆ ದಾಖಲೆಯಾಗಿ ಇರಿಸಿದ್ದ 2014ರ ರಿಟ್ ಅರ್ಜಿಯನ್ನು ಅದರ ಅನುಬಂಧಗಳ ಸಹಿತ ಅಧಿಕೃತವಾಗಿ ಸ್ವೀಕರಿಸಿತ್ತು. ಇದನ್ನು ರಾಹುಲ್‌ ಗಾಂಧಿ ಪರ ವಕೀಲರು ಬಲವಾಗಿ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೀಗೆ, ಈ ದಾಖಲೆಯನ್ನು ಹೆಚ್ಚುವರಿ ಸಾಕ್ಷ್ಯವಾಗಿ ಪರಿಗಣಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಾಡಿದ್ದ ಆದೇಶವನ್ನು ಹೈಕೋರ್ಟ್‌ ಈಗ ರದ್ದುಗೊಳಿಸಿದೆ.