NDPS Act 
ಸುದ್ದಿಗಳು

ಮುದ್ರಣದೋಷದಿಂದಾಗಿ ವಿನಾಕಾರಣ 2 ವರ್ಷ ಸೆರೆಯಲ್ಲಿದ್ದ ನೈಜೀರಿಯಾ ಪ್ರಜೆಗೆ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಆದೇಶ

ಅಕ್ರಮವಾಗಿ ಬಂಧನದಲ್ಲಿರುವವರಿಗೆ ಪರಿಹಾರ ನೀಡುವ ಯಾವುದೇ ನೀತಿ ಜಾರಿಯಲ್ಲಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ನಿಲುವಿಗೆ ಪೀಠ ಆಕ್ಷೇಪ ವ್ಯಕ್ತಪಡಿಸಿತು.

Bar & Bench

ವಿಧಿವಿಜ್ಞಾನ ವರದಿಯಲ್ಲಿ ಉಂಟಾದ ಮುದ್ರಣ ದೋಷದಿಂದಾಗಿ ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿ (ಎನ್‌ಡಿಪಿಎಸ್‌ ಆಕ್ಟ್‌) 2 ವರ್ಷಗಳ ಕಾಲ ವಿನಾಕಾರಣ ಬಂಧನಕ್ಕೊಳಗಾಗಿದ್ದ ನೈಜೀರಿಯಾ ಪ್ರಜೆಯೊಬ್ಬರಿಗೆ ₹2 ಲಕ್ಷ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ನೊವಾಫರ್‌ ಸ್ಯಾಮ್ಯುಯಲ್‌ ಇನೋವಾಮವೋಬಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ವರದಿಯಲ್ಲಿ ಮುದ್ರಣದೋಷವಿರುವುದನ್ನು ಪತ್ತೆ ಹಚ್ಚಿದ್ದ ನ್ಯಾ. ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಅಕ್ರಮ ಬಂಧನದಲ್ಲಿರುವವರಿಗೆ ಪರಿಹಾರ ನೀಡುವ ನೀತಿ ಜಾರಿಯಲ್ಲಿದೆಯೇ ಎಂಬ ಬಗ್ಗೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಸೂಚನೆ ಪಡೆಯುವ ಸಲುವಾಗಿ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಲಾಯಿತು.

ಹಾಗೆ ಪರಿಹಾರ ನೀಡುವ ಯಾವುದೇ ನೀತಿ ಜಾರಿಯಲ್ಲಿಲ್ಲ ಎಂಬ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಎ ಟಕಲ್ಕರ್ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ. ಭಾರತಿ “ಹಾಗಾದರೆ ನೀವು ಜನರನ್ನು ಕಂಬಿ ಎಣಿಸುವಂತೆ ಮಾಡಿ ಯಾವುದೇ ನೀತಿ ಇಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡುವುದಿಲ್ಲವೇ? ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ವಿಚಾರ ಎದುರಾದಾಗ ನಿಮಗೊಂದು ನೀತಿ ಬೇಕಿದೆಯೇ?” ಎಂದು ಪ್ರಶ್ನಿಸಿತು.

ಈ ಕೂಡಲೇ ಫೋನ್‌ ಮಾಡಿ ಸರ್ಕಾರದಿಂದ ಸೂಚನೆಗಳನ್ನು ಪಡೆಯಿರಿ ಎಂದು ಕೂಡ ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲರಿಗೆ ತಾಕೀತು ಮಾಡಿದರು. ಸರ್ಕಾರದಿಂದ ಸೂಚನೆ ಪಡೆದ ಟಕಲ್ಕರ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಾಗುವುದು. ಆದರೆ ನೀತಿ ಇಲ್ಲದೇ ಇರುವುದರಿಂದ ಪರಿಹಾರ ನೀಡಲಾಗದು ಎಂದರು.

ನೀತಿ ಇಲ್ಲದ ಕಾರಣಕ್ಕೆ ಪರಿಹಾರ ಒದಗಿಸಲು ಸಾಧ್ಯವಿಲ್ಲವೇ ಎಂದು ನ್ಯಾಯಮೂರ್ತಿ ಡಾಂಗ್ರೆ ಪ್ರಶ್ನಿಸಿದರು. ಸಂಬಂಧಪಟ್ಟ ವಿಧಿವಿಜ್ಞಾನ ಅಧಿಕಾರಿಯೇ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿರುವಾಗ ತನಿಖೆಯ ಅಗತ್ಯವೇನೆಂದು ಕೂಡ ಕೇಳಿದರು. ಆರೋಪಿಗೆ ಕ್ರಿಮಿನಲ್‌ ಹಿನ್ನೆಲೆಯಿದ್ದು ಅಧಿಕಾರಿ ಬೇರೆ ಪ್ರಕರಣಗಳಲ್ಲಿಯೂ ವರದಿ ಸಿದ್ಧಪಡಿಸಿದ್ದಾರೆ ಎಂದು ಅವರು ವಾದಿಸಿದರು. ಆದರೆ ಈ ವಾದವನ್ನು ಒಪ್ಪಲು ನ್ಯಾಯಾಲಯ ನಿರಾಕರಿಸಿತು.

ಭಾರತೀಯ ನಾಗರಿಕರಿಗೆ ಮಾತ್ರವಲ್ಲದೆ ವಿದೇಶಿ ಪ್ರಜೆಗಳಿಗೂ ಸ್ವಾತಂತ್ರ್ಯ ಖಾತರಿಪಡಿಸಲಾಗಿದೆ ಎಂದು ಒತ್ತಿ ಹೇಳಿದ ನ್ಯಾಯಾಲಯ ಅಸಾಧಾರಣವಾದ ಈ ಪ್ರಕರಣದಲ್ಲಿ ಆರು ವಾರಗಳೊಳಗೆ ಅರ್ಜಿದಾರರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.