ತಾನು ಭಾಗಿಯಾಗಿರದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನೀಡಿದ ಆದೇಶದ ಪ್ರತಿಯನ್ನು ಬಿಜೆಪಿ ನಾಯಕ ಕಿರೀಟ್ ಸೋಮೈಯ ಹೇಗೆ ಪಡೆದುಕೊಂಡರು ಎಂಬುದನ್ನು ಪತ್ತೆ ಮಾಡುವಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ಪುಣೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದೆ [ಹಸನ್ ಮುಶ್ರಿಫ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ವಿವಾದಿತ ಆದೇಶವನ್ನು ಮ್ಯಾಜಿಸ್ಟ್ರೇಟ್ ಹೊರಡಿಸಿದ್ದರು. ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್ ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.
ʼಸೋಮೈಯ ಅವರು ಮ್ಯಾಜಿಸ್ಟ್ರೇಟ್ ಆದೇಶದ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಆದೇಶದ ಪ್ರಮಾಣೀಕೃತ ಪ್ರತಿ ಸ್ವೀಕರಿಸಲು ತಾನು ಕಾಯಬೇಕಾಯಿತುʼ ಎಂದು ಪ್ರಕರಣವೊಂದರ ಆರೋಪಿ, ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್ ದೂರಿದ್ದರು.
ಇದೊಂದು ʼಗಂಭೀರ ವಿಚಾರʼ ಎಂದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಶರ್ಮಿಳಾ ದೇಶಮುಖ್ ಅವರಿದ್ದ ವಿಭಾಗೀಯ ಪೀಠ ʼಆದೇಶದ ಪ್ರತಿಯನ್ನು ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡದೇ ಇರುವಾಗ ದೃಢೀಕೃತ ಪ್ರತಿಗಾಗಿ ಅರ್ಜಿ ಸಲ್ಲಿಸದೆ, ಪಕ್ಷಕಾರರಲ್ಲದವರು ನ್ಯಾಯಾಂಗ ಆದೇಶದ ಪ್ರತಿಯನ್ನು ಹೇಗೆ ಮತ್ತು ಯಾವಾಗ ಪಡೆದರು ಎಂಬುದನ್ನು ಪತ್ತೆ ಮಾಡಲು ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದರು.
ಮುಂದಿನ ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಅದರ ವಿವರಗಳನ್ನು ಪೀಠಕ್ಕೆ ತಿಳಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ ಸೂಚಿಸಿದೆ.
ವಂಚನೆ ಆರೋಪದ ಮೇಲೆ ಕೊಲ್ಲಾಪುರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮುಶ್ರಿಫ್ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಪೀಠ ಈ ಆದೇಶ ನೀಡಿದೆ.