Stray dogs 
ಸುದ್ದಿಗಳು

ನಾಯಿ ಓಡಿಸಲು ಕೋಲು ಬಳಸುವ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ: ವಸತಿ ಸಂಘಕ್ಕೆ ಬಾಂಬೆ ಹೈಕೋರ್ಟ್ ಆದೇಶ

ಭದ್ರತಾ ಸಿಬ್ಬಂದಿ ಅಥವಾ ಇತರರು ಬಳಸುವ ಇಂತಹ ವಿಧಾನಗಳು ಪ್ರಾಣಿಗಳ ಮೇಲೆ ಕ್ರೌರ್ಯ ಎಸಗುವುದರ ಜೊತೆಗೆ ಆ ಪ್ರಾಣಿಗಳ ದಾಳಿಕೋರ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಎಂದು ವಿಭಾಗೀಯ ಪೀಠ ಹೇಳಿತು.

Bar & Bench

ಪ್ರಾಣಿಗಳನ್ನು ಹೆದರಿಸಲು, ಬೆದರಿಸಲು ಅಥವಾ ಗಾಯಗೊಳಿಸಲು ಕೋಲುಗಳನ್ನು ಬಳಸುವ ಭದ್ರತಾ ಸಿಬ್ಬಂದಿ ವಿರುದ್ಧ ಸಲ್ಲಿಸುವ ದೂರುಗಳನ್ನು ಸ್ವೀಕರಿಸುವಂತೆ ಮುಂಬೈನ ನಿವಾಸಿ ಕಲ್ಯಾಣ ಸಂಘವೊಂದಕ್ಕೆ ಬಾಂಬೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಕೋಲುಗಳಿಂದ ಪ್ರಾಣಿಗಳನ್ನು ಥಳಿಸುವುದು ಅವುಗಳ ವಿರುದ್ಧದ ಕ್ರೌರ್ಯವಾಗುವುದರಿಂದ ಇಂತಹ ದೂರುಗಳಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬೇಕೆಂದು ಸಂಘಕ್ಕೆ  ನ್ಯಾಯಮೂರ್ತಿಗಳಾದ ಜಿ ಎಸ್‌ ಕುಲಕರ್ಣಿ ಮತ್ತು ಆರ್‌ ಎನ್‌ ಲಡ್ಡಾ ಅವರಿದ್ದ ಪೀಠ ಸೂಚಿಸಿತು.  

ಭದ್ರತಾ ಸಿಬ್ಬಂದಿ ಅಥವಾ ಇತರರು ಬಳಸುವ ಇಂತಹ ವಿಧಾನಗಳು ಪ್ರಾಣಿಗಳ ಮೇಲೆ ಕ್ರೌರ್ಯ ಎಸಗುವುದರ ಜೊತೆಗೆ ಆ ಪ್ರಾಣಿಗಳ ದಾಳಿಕೋರ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಎಂದು ವಿಭಾಗೀಯ ಪೀಠ ಹೇಳಿತು.

ಬೀದಿನಾಯಿಗಳಿಗೆ ಆಹಾರ ನೀಡಲು ಸ್ಥಳ ನಿಗದಿಪಡಿಸುತ್ತಿಲ್ಲ ಮತ್ತು ಆಹಾರ ನೀಡುವುನ್ನೂ ನಿರಾಕರಿಸುತ್ತಿದೆ ಎಂದು ದೂರಿ ಆರ್‌ಎನ್‌ಎ ರಾಯಲ್ ಪಾರ್ಕ್ ಸಿಎಚ್‌ಎಸ್‌ಎಲ್‌ನ ಸೊಸೈಟಿಯ ನಿವಾಸಿ ಪರೋಮಿತಾ ಪುತ್ರನ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಆಲಿಸಿದ್ದ ನ್ಯಾಯಾಲಯವು ನಿವಾಸಿಗಳ ಕಲ್ಯಾಣ ಸಂಘಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಬೀದಿ ನಾಯಿಗಳ ಕಲ್ಯಾಣ ಸಂಘದ ಮುಖ್ಯಸ್ಥರಿಗೆ ಸೂಚಿಸಿತ್ತು.

ಬೀದಿನಾಯಿಗಳಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನಿಟ್ಟಿದ್ದ ಅರ್ಜಿದಾರ ಪುತ್ರನ್‌ ನಾಯಿಗಳನ್ನು ಓಡಿಸಲು ಸೊಸೈಟಿ ಕೆಲ ಬೌನ್ಸರ್‌ಗಳನ್ನು ನೇಮಿಸಿದೆ ಎಂದು ದೂರಿದ್ದರು. ಆದರೆ ಅವರು ಭದ್ರತಾ ಸಿಬ್ಬಂದಿ ಎಂದು ಸೊಸೈಟಿ ನ್ಯಾಯಾಲಯಕ್ಕೆ ಸಮಜಾಯಿಷಿ ನೀಡಿತು.

ಈ ಹಂತದಲ್ಲಿ ನ್ಯಾಯಾಲಯ ಅಂತಹ ಭದ್ರತಾ ಸಿಬ್ಬಂದಿ ಯಾವುದೇ ಅಕ್ರಮ ಎಸಗಿದರೆ ಸೂಕ್ತ ಕ್ರಮ ಜರುಗಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತು.