ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಸಂಬಂಧಿತ ಸೇವೆಗಳನ್ನು ಒದಗಿಸುವ ಅನಧಿಕೃತ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಬಾಂಬೆ ಹೈಕೋರ್ಟ್ ಜನವರಿ 12ರಂದು ಜಾನ್ ಡೋ (ಅನಾಮಿಕ ವ್ಯಕ್ತಿ ಅಥವಾ ವ್ಯಕ್ತಿಗಳ ವಿರುದ್ಧ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಕಾನೂನಾತ್ಮಕವಾಗಿ ತೆಗೆದುಕೊಳ್ಳಬಹುದಾದ ಕಾನೂನಾತ್ಮಕ ಆದೇಶ) ಆದೇಶ ಮಾಡಿದೆ [ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ ವಿರುದ್ಧ ಎಕ್ಸ್ಟ್ರಾ ಟೆಕ್ ವರ್ಲ್ಡ್ ಮತ್ತು ಅದರ್ಸ್.].
ಜಾನ್ ಡೋ ಆದೇಶಗಳು ಅನಾಮಧೇಯ ಸಂಸ್ಥೆಗಳ ವಿರುದ್ಧ ಹೊರಡಿಸುವ ನಿರ್ಬಂಧಕಾಜ್ಞೆಗಳಾಗಿವೆ. ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯನ್ನು ಒಳಗೊಂಡಿರುವ ಮೊಕದ್ದಮೆಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಹೊರಡಿಸಲಾಗುತ್ತದೆ. ಏಕೆಂದರೆ ಇಂತಹ ಉಲ್ಲಂಘನೆ ನಡೆಸುವ ಪಕ್ಷಕಾರರನ್ನು ಪತ್ತೆಹಚ್ಚುವುದು ಪ್ರಾಯೋಗಿಕವಾಗಿ ಅಸಾಧ್ಯ.
ಜಾನ್ ಡೋ ಅನಾಮಿಕ ಕಂಪನಿಗಳು ಹಾಗೂ 13 ಪರಿಚಿತ ಕಂಪನಿಗಳು ಯುಟಿಐಐಟಿಎಸ್ಎಲ್ ನೋಂದಾಯಿತ ಮಾರ್ಕ್ ಅನ್ನು ತಮ್ಮದೆಂದು ಬಳಕೆ ಮಾಡುವುದನ್ನು ತಡೆಯುವಂತೆ ಕೋರಿ ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ಎಲ್) ಸಲ್ಲಿಸಿದ್ದ ಕೃತಿಸ್ವಾಮ್ಯ ಉಲ್ಲಂಘನೆ ಮೊಕದ್ದಮೆ ವಿಚಾರಣೆ ನಡೆಸಿ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶ ಮಾಡಿದೆ.
ಯುಟಿಐಐಟಿಎಸ್ಎಲ್ ಅವರ ಕೆಲಸವು ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಿ ತುರ್ತು ಆದೇಶಗಳನ್ನು ಕೋರಲಾಗಿತ್ತು.
ಪ್ರತಿವಾದಿ ವೆಬ್‌ಸೈಟ್‌ಗಳ ವಾದ ಆಲಿಸದೇ ತುರ್ತು ಆದೇಶ ಹೊರಡಿಸಲು ನ್ಯಾಯಾಲಯ ಒಪ್ಪಿಕೊಂಡಿದೆ. ಅನಧಿಕೃತ ವೆಬ್‌ಸೈಟ್‌ಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ಅವಕಾಶ ನೀಡುವುದು ಗೌಪ್ಯ ಮಾಹಿತಿಯ ಸೋರಿಕೆಗೆ ಕಾರಣವಾಗಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.
ಅರ್ಜಿಯಲ್ಲಿ ಒದಗಿಸಲಾದ ಅಗತ್ಯ ಮಾಹಿತಿಯನ್ನು ಪರಿಗಣಿಸಲಾಗಿದ್ದು, ಪ್ರಕರಣವು ಮಧ್ಯಂತರ ಆದೇಶಕ್ಕೆ ಅರ್ಹವಾಗಿದೆ, ಏಕೆಂದರೆ ಎಲ್ಲಾ ಪ್ರತಿವಾದಿಗಳನ್ನು ಪತ್ತೆಹಚ್ಚುವುದು ಮತ್ತು ಅವರಿಗೆ ನೋಟಿಸ್ ನೀಡುವುದು ಅಸಾಧ್ಯ; ಇಂತಹ ನಕಲಿ ವೆಬ್‌ಸೈಟ್‌ಗಳು ಸಕ್ರಿಯವಾಗಿ ಮುಂದುವರಿಯುವುದರಿಂದ, ಇದು ಸರಿಪಡಿಸಲಾಗದ ಹಾನಿ ಉಂಟುಮಾಡುತ್ತದೆ ಮತ್ತು ವಾದಿಯ ಅಮೂಲ್ಯವಾದ ಗೌಪ್ಯ ದತ್ತಾಂಶದ ಭದ್ರತೆಯನ್ನು ಅಪಾಯಕ್ಕೆ ಒಡ್ಡುತ್ತವೆ. ರಾಷ್ಟ್ರೀಯ ಮಟ್ಟದಲ್ಲಿ ಬೆದರಿಕೆಯನ್ನುಂಟು ಮಾಡುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದ್ದರಿಂದ, ನ್ಯಾಯಮೂರ್ತಿ ಡಾಂಗ್ರೆ ಅವರು ಕಂಪನಿಗಳಿಗೆ ಆಕ್ಷೇಪಾರ್ಹ ವೆಬ್‌ಸೈಟ್‌ಗಳನ್ನು ತೆಗೆದುಹಾಕಲು ಮತ್ತು ಆಕ್ಷೇಪಾರ್ಹ / ಅನಧಿಕೃತ ಡೊಮೇನ್‌ಗಳನ್ನು ನಿಷ್ಕ್ರಿಯಗೊಳಿಸಲು ಆದೇಶಿಸಿದರು.
ಪ್ರಸ್ತುತ ಆದೇಶವನ್ನು ಕಾರ್ಯಗತಗೊಳಿಸಲು ಯುಟಿಐಐಟಿಎಸ್ಎಲ್‌ಗೆ ನೆರವು ನೀಡುವಂತೆ ನ್ಯಾಯಾಲಯವು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿತು.
ತನ್ನ ನೊಂದಾಯಿತ ಕೃತಿಸ್ವಾಮ್ಯದ ಉಲ್ಲಂಘನೆ ಹಾಗೂ ನೊಂದಾಯಿತ ಗುರುತುಗಳು ಹಾಗೂ ಚಿಹ್ನೆಗಳನ್ನು ಅನುಮತಿಯಿಲ್ಲದೆ ಬಳಸುವುದಕ್ಕೆ ಶಾಶ್ವತ ನಿರ್ಬಂಧಕ ಆದೇಶ ಕೋರಿ ಯುಟಿಐಐಟಿಎಸ್ಎಲ್ ದಾವೆ ಹೂಡಿದೆ.
ಪ್ಯಾನ್ ಕಾರ್ಡ್ ವಿತರಣೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲು ಯುಟಿಐಐಟಿಎಸ್ಎಲ್‌ನಿಂದ ಅಧಿಕಾರ ಪಡೆಯಲಾಗಿದೆ ಎಂದು ಪ್ರತಿವಾದಿ ಕಂಪೆನಿಗಳು ತಮ್ಮ ಬಗ್ಗೆ ತಪ್ಪಾಗಿ ಬಿಂಬಿಸಿಕೊಳ್ಳುತ್ತಿವೆ, ಆ ಮೂಲಕ ಜನತೆಗೆ ಮೋಸ ಎಸಗುತ್ತಿವೆ ಎನ್ನುವುದು ಯುಟಿಐಐಟಿಎಸ್‌ಎಲ್‌ನ ಪ್ರಾಥಮಿಕ ವಾದವಾಗಿತ್ತು.
ಪ್ರತಿವಾದಿಗಳ ಕಾನೂನುಬಾಹಿರ ಕೃತ್ಯಗಳನ್ನು ಎಸಗುವ ಮೂಲಕ ತನ್ನ ಖ್ಯಾತಿಗೆ ಕಳಂಕ ತರುವುದನ್ನು ತಡೆಯುವುದು ಹಾಗೂ ಸಂಭಾವ್ಯ ವಿತ್ತೀಯ ನಷ್ಟವನ್ನು ತಗ್ಗಿಸುವ ಸಲುವಾಗಿ ಯುಟಿಐಐಟಿಎಸ್ಎಲ್ ತನ್ನ ಗುರುತು ಮತ್ತು ಚಿಹ್ನೆಗಳನ್ನು ರಕ್ಷಿಸಲು ಪೂರ್ವಭಾವಿ ಆದೇಶಗಳನ್ನು ಕೋರಿತು.
[ಆದೇಶ ಓದಿ]