Anil Ambani and Bombay High Court  Twitter
ಸುದ್ದಿಗಳು

ಆದಾಯ ತೆರಿಗೆ ಇಲಾಖೆ ತನಿಖೆ: ಅನಿಲ್ ಅಂಬಾನಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದ ಬಾಂಬೆ ಹೈಕೋರ್ಟ್

ಆದಾಯ ತೆರಿಗೆ ಇಲಾಖೆ ತನ್ನ ವಿರುದ್ಧ ₹ 420 ಕೋಟಿ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನೀಡಿರುವ ಶೋಕಾಸ್ ನೋಟಿಸನ್ನು ರಿಲಯನ್ಸ್ ಎಡಿಎ ಸಮೂಹದ ಅಧ್ಯಕ್ಷರಾಗಿರುವ ಅನಿಲ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Bar & Bench

ರಿಲಯನ್ಸ್ (ಎಡಿಎ) ಗ್ರೂಪ್‌ನ ಅಧ್ಯಕ್ಷ ಅನಿಲ್ ಅಂಬಾನಿ ಅವರ ವಿರುದ್ಧ ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸ್ವತ್ತು)  ಮತ್ತು ತೆರಿಗೆ ವಿಧಿಸುವಿಕೆ ಕಾಯಿದೆ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್‌ ಸೋಮವಾರ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ತಮ್ಮ ವಿರುದ್ಧ ನೀಡಿರುವ ಶೋಕಾಸ್‌ ನೋಟಿಸ್‌ಗೆ ಸಂಬಂಧಿಸಿದಂತೆ ತುರ್ತಾಗಿ ವಿಚಾರಣೆ ನಡೆಸುವಂತೆ ಅನಿಲ್‌ ಅಂಬಾನಿ ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಎಸ್‌ ವಿ ಗಂಗಾಪುರವಾಲಾ ಮತ್ತು ಆರ್‌ ಎನ್ ಲಾಧಾ ಅವರ ಪೀಠವು ಇಂದು ಈ ಆದೇಶ ನೀಡಿದೆ.

ಶೋಕಾಸ್‌ ನೋಟಿಸ್‌ಗೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಆದಾಯ ತೆರಿಗೆ ಇಲಾಖೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಮುಂಬೈನ ಆದಾಯ ತೆರಿಗೆ ಆಯುಕ್ತ ಮತ್ತು ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕರ ಪರ ವಕೀಲರು ಅರ್ಜಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ನವೆಂಬರ್ 17, 2022ಕ್ಕೆ ಮುಂದೂಡಿತು.

ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಇರುವ ₹814 ಕೋಟಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣಕ್ಕೆ ಸಂಬಂಧಿಸಿದಂತೆ ₹420 ಕೋಟಿ ತೆರಿಗೆ ವಂಚನೆ ಮಾಡಿದ ಆರೋಪದಡಿ 2022ರ ಆಗಸ್ಟ್ 9ರಂದು ಆದಾಯ ತೆರಿಗೆ ಇಲಾಖೆ ಅನಿಲ್‌ ಅಂಬಾನಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.