ಕ್ರಿಮಿನಲ್ ಬೆದರಿಕೆ ಆರೋಪದಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ 2019ರಲ್ಲಿ ಪತ್ರಕರ್ತರೊಬ್ಬರು ದಾಖಲಿಸಿದ್ದ ದೂರನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾ. ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಮುಂಬೈನಲ್ಲಿ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಸಲ್ಮಾನ್ ತನ್ನ ಜೊತೆ ಜಗಳವಾಡಿ ಫೋನ್ ಕಸಿದುಕೊಂಡಿದ್ದರು ಎಂದು ಪತ್ರಕರ್ತರೊಬ್ಬರು ಆರೋಪಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ತನಗೆ ನೀಡಲಾದ ಸಮನ್ಸ್ ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ದೂರು ದಾಖಲಿಸಿರುವ ಡಿಎನ್ ನಗರ ಪೊಲೀಸ್ ಠಾಣೆಯಿಂದ ಮ್ಯಾಜಿಸ್ಟ್ರೇಟ್ ಕೋರ್ಟ್ ವರದಿ ಕೇಳಿತ್ತು. ಸಿಆರ್‌ಪಿಸಿ ಸೆಕ್ಷನ್ 202ರ ಅಡಿಯಲ್ಲಿ "ಸಕಾರಾತ್ಮಕ ಪೊಲೀಸ್ ವರದಿ" ಮತ್ತಿತರ ಸಾಕ್ಷ್ಯಗಳ ಆಧಾರದ ಮೇಲೆ, ಖಾನ್ ವಿರುದ್ಧ ವಿಚಾರಣೆ ನಡೆಸಲು ಸಾಕಷ್ಟು ಆಧಾರವಿದೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿತ್ತು.
ಬಳಿಕ ಸಲ್ಮಾನ್ ಏಪ್ರಿಲ್ 2022ರಲ್ಲಿ ಆದೇಶ ತಡೆಹಿಡಿಯುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ದೂರನ್ನು ರದ್ದುಗೊಳಿಸುವಂತೆಯೂ ಕೋರಿದರು. ಖಾನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಆಬದ್ ಪೊಂಡಾ “ತಮ್ಮ ಫೋಟೊ ವೀಡಿಯೊ ಚಿತ್ರೀಕರಣ ಮಾಡದಂತೆ ತಡೆಯಲು ಮಾತ್ರ ತಮ್ಮ ಅಂಗರಕ್ಷಕರಿಗೆ ಸಲ್ಮಾನ್ ಸೂಚಿಸಿದ್ದರು” ಎಂದು ಪ್ರತಿಪಾದಿಸಿದ್ದರು.
ದೂರು ಸಲ್ಲಿಸಿದ್ದ ಪತ್ರಕರ್ತರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ಫಜೀಲ್ ಹುಸೇನ್ “ದೂರುದಾರ ಆಘಾತಕ್ಕೊಳಗಾಗಿದ್ದು ಮೊದಲ ಸಲ ದೂರು ಸಲ್ಲಿಸಿದಾಗ ನಟನ ಹೆಸರು ನಮೂದಿಸುವಲ್ಲಿ ಅವರ ಕಡೆಯಿಂದ ಲೋಪವಾಗಿದೆ” ಎಂದಿದ್ದರು. ಆದರೆ ನಂತರ ದಾಖಲಿಸಿದ ತಮ್ಮ ಹೇಳಿಕೆಯಲ್ಲಿ ಅವರು ಸಲ್ಮಾನ್ ಹೆಸರನ್ನು ಉಲ್ಲೇಖಿಸಿದ್ದರು. ಇದು ನ್ಯಾಯಾಲಯದ ಗಮನ ಸೆಳೆದಿತ್ತು.